ಬಂಟ್ವಾಳ, ಸೆಪ್ಟೆಂಬರ್ 01, 2025 (ಕರಾವಳಿ ಟೈಮ್ಸ್) : ಮಂಚಿ-ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಸೌಹಾರ್ದ ಕೂಟ ಆಗಸ್ಟ್ 31 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಟಿ ಅವರು ಮಾತನಾಡಿ, ಸ್ವಯಂ ಪ್ರೇರಣೆಯಿಂದ ಒಂದು ಶಾಲೆಯ ಅಭಿವೃದ್ಧಿಯಲ್ಲಿ ಕಾಳಜಿ ತೋರುವ ಹಿರಿಯ ವಿದ್ಯಾರ್ಥಿಗಳ ಸಮಾಜಮುಖಿ ಚಿಂತನೆ ಅಭಿನಂದನೀಯ. ವಿವಿಧ ಧರ್ಮೀಯ ಮಕ್ಕಳ ಆಲಯವಾಗಿ ಈ ಪ್ರೌಢಶಾಲೆ ಸೌಹಾರ್ದತೆಯ ಬದುಕಿನ ಆಶಯಗಳನ್ನು ನೀಡುತ್ತಾ ಬಂದಿದೆ. ಇದು ಒಗ್ಗಟ್ಟು, ಸಹಬಾಳ್ವೆಗೆ ಪ್ರೇರಣೆಯಾಗುತ್ತದೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಿದ ಮಂಚಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮತ್ತು ಶಾಲಾ ಹಿರಿಯ ವಿದ್ಯಾರ್ಥಿ ಕೇಶವ ರಾವ್ ನೂಜಿಪ್ಪಾಡಿ ಮಾತನಾಡಿ, ಬಾಲ್ಯದ ಶಾಲಾ ದಿನಗಳು ಒಂದು ಸುಂದರ ನೆನಪು. ಮೂಲಭೂತ ಸೌಕರ್ಯಗಳಿಲ್ಲದ ದಿನಗಳಲ್ಲಿಯೂ ಕಲಿಕೆಯ ಆಸಕ್ತಿ ಹೊತ್ತು ಕಲಿಕೆಯ ಜೊತೆಗೆ ಬದುಕಿನ ಪಾಠಗಳನ್ನು ಅರಿತು, ಬೆಳೆದು ನಿಂತ ಹಿರಿಯ ವಿದ್ಯಾರ್ಥಿಗಳೆಲ್ಲಾ ಶಾಲೆಗೆ ಆಧಾರ ಸ್ತಂಭವಾಗಬೇಕು ಎಂದರು.
ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಮತ್ತು ಹಿರಿಯ ವಿದ್ಯಾರ್ಥಿ ಉಮಾನಾಥ ರೈ ಮೇರಾವು ಮಾತನಾಡಿ, ನಿರ್ದಿಷ್ಟ ಕಾರ್ಯ ಯೋಜನೆಗಳ ಮೂಲಕ ಪ್ರೌಢಶಾಲೆಯ ಸುವರ್ಣ ಸಂಭ್ರಮವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಗಳ ಸಹಕಾರ ತುಂಬಾ ಅಗತ್ಯ. ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿರುವ ಹಿರಿಯ ವಿದ್ಯಾರ್ಥಿಗಳು ಶಾಲೆಯ ನೆರವಿಗೆ ನಿಂತು ಭೌತಿಕ ಅಭಿವೃದ್ಧಿಯಲ್ಲಿ ತನ್ನ ಪಾತ್ರವನ್ನು ನೀಡಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ್ ರಾವ್ ಮಂಚಿ ಆಶಯ ನುಡಿಗಳನ್ನಾಡಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಮಾಧವ ಮಾವೆ ಸದಸ್ಯತನ ಅಭಿಯಾನದಲ್ಲಿ ಇಲ್ಲಿನ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಕರೆ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಿಟ್ಲ ಶಾಲೆಯ ಪ್ರಗತಿಯನ್ನು ವಿಶ್ಲೇಷಿಸಿದರು.
ಇದೇ ವೇಳೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಬೇರೆ ಬೇರೆ ಚಟುವಟಿಕೆಯಲ್ಲಿ ಸಹಕರಿಸಿದ ಹಿರಿಯ ವಿದ್ಯಾರ್ಥಿಗಳಾದ ಪ್ರದೀಪ್ ಕೈಯೂರು, ಭವ್ಯಶ್ರೀ ಕೋಕಳ, ಕೃತಿಕಾ ಆಳಾಬೆ, ನೆಸ್ಲಿನ್ ಡಿಸೋಜಾ, ಅಶ್ವಿತಾ, ನವ್ಯಶ್ರೀ, ಪುಷ್ಪ, ಸೌಜನ್ಯ ಅವರನ್ನು ಗೌರವಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಸುಲೈಮಾನ್ ಜಿ ಸುರಿಬೈಲು, ಗಣೇಶ್ ಪ್ರಭು, ಎಂ ಡಿ ಮಂಚಿ, ವನಜಾಕ್ಷಿ ಸಿ ರೈ, ಮ್ಯಾಕ್ಸಿಮ್ ಫೆರ್ನಾಂಡಿಸ್, ಉಮರ್ ಕುಂಞ ಸಾಲೆತ್ತೂರು, ಸುರೇಖಾ ಡಿ ಶೆಟ್ಟಿ, ಜಯಪ್ರಕಾಶ್ ರೈ ಮೇರಾವು, ಇಬ್ರಾಹಿಂ ಮಂಚಿ ಮೊದಲಾದವರು ಭಾಗವಹಿಸಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಹರ್ಷಿತ್ ಶೆಟ್ಟಿ ಮಂಚಿ ವರದಿ ವಾಚಿಸಿದರು. ಕೋಶಾಧಿಕಾರಿ ಲಯನ್ ರಮಾನಂದ ನೂಜಿಪ್ಪಾಡಿ ಲೆಕ್ಕಪತ್ರ ಮಂಡಿಸಿ, ವಂದಿಸಿದರು. ತಾರಾನಾಥ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment