ಮಂಗಳೂರು, ಸೆಪ್ಟೆಂಬರ್ 02, 2025 (ಕರಾವಳಿ ಟೈಮ್ಸ್) : ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಪ್ರಕರಣ ಬೇಧಿಸಿದ ಪಣಂಬೂರು ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರ ರಾಜ್ಯದ ನಳಂದಾ ಜಿಲ್ಲೆಯ ನಿವಾಸಿ ಹರ್ಷ ಕುಮಾರ್ (22) ಹಾಗೂ ವೈಶಾಲಿ ಜಿಲ್ಲೆಯ ನಿವಾಸಿ ಅಮರ್ ಕುಮಾರ (28) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳಿಂದ ಮಾದಕ ವಸ್ತುಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62ನೇ ತೋಕೂರು ಗ್ರಾಮದ, ತೋಕೂರು ರೈಲ್ವೇ ಸ್ಟೇಶನ್ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ಮಾದಕ ವಸ್ತು ವಶದಲ್ಲಿ ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಸೈ ಜ್ಞಾನಶೇಖರ ಅವರಿಗೆ ಬಂದ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ ಅವರ ನಿರ್ದೆಶನದಂತೆ ಪಣಂಬೂರು ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ಜ್ಞಾನಶೇಖರ ಅವರು ಠಾಣಾ ಸಿಬ್ಬಂದಿಗಳ ಜೊತೆ ಸೋಮವಾರ (ಸೆ 1) ಸಂಜೆ 4.40 ರ ವೇಳೆಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಹರ್ಷ ಕುಮಾರ್ ಎಂಬಾತನಿಂದ 1 ಕೆ ಜಿ 230 ಗ್ರಾಂ ಮತ್ತು ಆರೋಪಿ ಅಮರ್ ಕುಮಾರ್ ಎಂಬಾತನಿಂದ 80 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 75 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಸಾರ್ವಜನಿಕರನ್ನು ಗುರಿಯಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಉಪಯೋಗಿಸುತ್ತಿದ್ದ 2 ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಒಬ್ಬಾತ ಬಿಹಾರದ ಪಟ್ನಾದಲ್ಲಿ ಮೀಶೋ ಮತ್ತು ಫ್ಲಿಫ್ ಕಾರ್ಟ್ ಹಬ್ ನಲ್ಲಿ ಮತ್ತು ಇನ್ನೊಬ್ಬ ದೆಹಲಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಆರೋಪಿಗಳ ವಿರುದ್ದ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2025 ಕಲಂ 8(c), 20(b)(ii)(B) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment