ಬಂಟ್ವಾಳ, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ರಾಜಕೀಯ ಒತ್ತಡದ ಮೇರೆಗೆ ಜಿಲ್ಲಾ ಸಹಕಾರಿ ನಿಬಂಧಕರು ಮೇ 25ರ ಬಳಿಕ ಅನರ್ಹಗೊಳಿಸಿದ ಬಂಟ್ವಾಳ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರ ಅನರ್ಹತೆಯನ್ನು ರಾಜ್ಯ ಉಚ್ಚ ನ್ಯಾಯಾಲಯ ಅಮಾನತುಗೊಳಿಸಿ ವಿಚಾರಣೆ ನಡೆಸಲು ಜಂಟಿ ಸಹಕಾರಿ ನಿಬಂಧಕರಿಗೆ ಆದೇಶ ಹೊರಡಿಸಿದ್ದು, ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಕ್ತಾಗೊಂಡ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳಿಗೆ ಕೂಡಲೇ ಪರಿಷ್ಕøತ ಅರ್ಹ ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸುವಂತೆ ಸೂಚಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ, ನೋಟರಿ-ನ್ಯಾಯವಾದಿ ಅರುಣ್ ರೋಶನ್ ಡಿ’ಸೋಜ ತಿಳಿಸಿದರು.
ಗುರುವಾರ ಸಂಜೆ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ರಾಜಕೀಯ ಒತ್ತಡದಿಂದ ನಿರ್ದೇಶಕರು ಅನರ್ಹಗೊಳ್ಳುವ ಮುಂಚೆ ಪ್ರಸ್ತುತ ವರ್ಷದಲ್ಲಿ 11 ಆಡಳಿತ ಮಂಡಳಿ ಸಭೆಗಳು, 10 ಸಾಲ ಸಮಿತಿ ಸಭೆಗಳು ನಡೆದು ಬ್ಯಾಂಕಿನ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲಾಗಿದೆ ಎಂದರು.
ಪ್ರಸ್ತುತ 2024-25ನೇ ಸಾಲಿನಲ್ಲಿ ಬ್ಯಾಂಕು 40.06 ಲಕ್ಷ ಲಾಭ ಗಳಿಸಿ ತನ್ಮೂಲಕ 7% ಡಿವಿಡೆಂಡ್ (ಪಾಲು ಮುನಾಫೆ) ತನ್ನ ಸದಸ್ಯರಿಗೆ ಹಂಚಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದ ಅವರು, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಪಡೆದ ಸಾಲ ಹೊರಬಾಕಿ 1181.32 ಲಕ್ಷ ಆಗಿದ್ದು ಈ ವರ್ಷದ ಮಾರ್ಚ್ ಅಂತ್ಯಕ್ಕೆ ಸಂದಾಯವಾಗಬೇಕಿದ್ದ ಕರಾಸಕೃ ಮತ್ತು ಗ್ರಾ ಅ ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರುಪಾವತಿಸಲಾಗಿದೆ ಎಂದರು.
2024-25 ನೇ ಸಾಲಿನಲ್ಲಿ 425.12 ಲಕ್ಷ ವಸೂಲಿ ತಗಾದೆ ಹೊಂದಿದ್ದು ಆ ಪೈಕಿ 385.75 ಲಕ್ಷ ರೂಪಾಯಿ ವಸೂಲಿ ಮಾಡಿ ಶೇಕಡಾ 90.74% ವಸೂಲಾತಿ ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದ ರೋಶನ್ ಡಿ ಸೋಜ, ಬ್ಯಾಂಕ್ ಪ್ರಸ್ತುತ ವರ್ಷದಲ್ಲಿ 40.06 ಲಕ್ಷ ಲಾಭ ಗಳಿಸಿದ್ದು, ಗ್ರಾಹಕರಿಗೆ 7% ಶೇಕಡಾ ಡಿವಿಡೆಂಡ್ ಘೋಷಿಸಿದೆ ಎಂದರು.
ಪ್ರಸ್ತುತ 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ 1641.44 ಲಕ್ಷ ಸಾಲ ವಿತರಿಸಲಾಗಿದೆ. ಒಟ್ಟು ಪಾಲು ಬಂಡವಾಳ 188.09 ಲಕ್ಷ ಇದ್ದು, ಈ ಬ್ಯಾಂಕ್ ಈ ವರ್ಷದ ಮಾರ್ಚ್ ಅಂತ್ಯಕ್ಕೆ 53.59 ಲಕ್ಷ ಕ್ಷೇಮ ನಿಧಿ ಮತ್ತು 177.89 ಲಕ್ಷ ರೂಪಾಯಿ ಇತರ ನಿಧಿ ಹಾಗೂ 1902.52 ಲಕ್ಷ ಠೇವಣಿಯನ್ನು ಹೊಂದಿದೆ ಎಂದ ಅರುಣ್ ರೋಶನ್ ಡಿ’ಸೋಜ 2024-25ರಲ್ಲಿ ನಬಾರ್ಡ್ ಯೋಜನೆಯಡಿ 595 ಸದಸ್ಯರಿಗೆ 536.04 ಲಕ್ಷ ಕೃಷಿ ಸಾಲ ಮತ್ತು ಸ್ವಂತ ಬಂಡವಾಳ ಯೋಜನೆಯಲ್ಲಿ 768 ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಯೋಜನೆಗಳಲ್ಲಿ 806.88 ಲಕ್ಷ ಸಾಲ ವಿತರಿಸಿದೆ ಎಂದರು.
ಬಂಟ್ವಾಳ ತಾಲೂಕಿನ 84 ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೃಷಿಕರ ಸೇವೆಯ ಧ್ಯೇಯವನ್ನಿಟ್ಟುಕೊಂಡು 1962ನೇ ಇಸವಿಯಲ್ಲಿ ಸ್ಥಾಪನೆಗೊಂಡ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ ತಾಲೂಕಿನ ರೈತರಿಗೆ ದೀರ್ಘಾವಧಿ ಹಾಗೂ ಮಧ್ಯಮಾವಧಿ ಸಾಲ ನೀಡುವ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಪ್ರಸ್ತುತ 10,767 ಸದಸ್ಯರನ್ನು ಹೊಂದಿರುತ್ತದೆ ಎಂದ ಅರುಣ್ ರೋಶನ್ ಅವರು, ಬ್ಯಾಂಕು ನಬಾರ್ಡ್ ಸಾಲ ವಸೂಲಾತಿಯಲ್ಲಿ 2021-22ರಲ್ಲಿ 75.17%, 2022-23ರಲ್ಲಿ 75.16%, 2023-24ರಲ್ಲಿ 94% ವಸೂಲಾತಿ ಸಾಧಿಸಿದ್ದು, ಜಿಲ್ಲಾ ಮಟ್ಟದಲ್ಲಿ 2022ರ ಸಾಲಿನಲ್ಲಿ ದ್ವಿತೀಯ ಸ್ಥಾನ, 2022-23, 2023-24 ಮತ್ತು 2024-25ರಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ನಿರಂತರ 4 ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ವಸೂಲಾತಿ ಸಾಧನೆಗಾಗಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿ ಪಡೆಯಲು ಅರ್ಹರಾಗಿರುವುದನ್ನು ಹಾಗೂ ರಾಜ್ಯದ 183 ಪಿ ಎಲ್ ಡಿ ಬ್ಯಾಂಕುಗಳಲ್ಲಿ ಲಾಭಗಳಿಸಿದ ಕೆಲವೇ 20 ಪಿ ಎಲ್ ಡಿ ಬ್ಯಾಂಕ್‍ಗಳ ಪೈಕಿ ನಮ್ಮದು ಒಂದು ಎಂದು ತಿಳಿಸಲು ಸಂತೋಷವಾಗುತ್ತಿದ್ದು, ಈ ಸಾಧನೆಗೆ ಕಾರಣರಾದ ಬ್ಯಾಂಕಿನ ಎಲ್ಲಾ ರೈತ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.
ದೀರ್ಘಾವಧಿ ಸಾಲ ವಿತರಣೆ ಅಲ್ಲದೆ ಇತ್ತೀಚೆಗೆ ಆರಂಭಗೊಂಡ ಬ್ಯಾಂಕಿಂಗ್ ವಿಭಾಗದಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಠೇವಣಿ, ಮತ್ತು ನಿತ್ಯ ಭೂ ನಿಧಿ ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತ ಸದಸ್ಯರಲ್ಲಿ ಉಳಿತಾಯ ಮನೋಭಾವನೆಯನ್ನು ಪ್ರೇರೇಪಿಸಿ, ಈ ವ್ಯವಹಾರದಲ್ಲಿ ಈವರೆಗೆ 63 ಕೋಟಿಗೂ ಮಿಕ್ಕಿ ಸಾಲ ನೀಡಿರುತ್ತದೆ. ಅಲ್ಲದೆ 2024-25ನೇ ಸಾಲಿನ ಅಂತ್ಯಕ್ಕೆ ಈ ಯೋಜನೆಯಲ್ಲಿ ಸಂಗ್ರಹಿಸಿದ ಠೇವಣಿ ಹೊರಬಾಕಿ ಮೊತ್ತ 1902.51 ಲಕ್ಷ ಇದ್ದು, ವರ್ಷಾಂತ್ಯಕ್ಕೆ ಠೇವಣಿ ಯೋಜನೆಯಲ್ಲಿ ಸದಸ್ಯರಿಂದ ಬರಬೇಕಾದ ಸಾಲ ಹೊರಬಾಕಿ ಮೊಬಲಗು 1566.30 ಲಕ್ಷವಾಗಿದೆ. 576.28 ಲಕ್ಷ ಮೊಬಲಗನ್ನು ಇತರೆ ಸಂಸ್ಥೆಗಳಲ್ಲಿ ಹಾಗೂ ಬ್ಯಾಂಕ್ ಖಾತೆಗಳಲ್ಲಿ ವಿನಿಯೋಗಿಸಲಾಗಿದೆ. ಅಲ್ಲದೆ ಮುಂದಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ ರೈತ ಸದಸ್ಯರಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದ ರೋಶನ್ ಡಿಸೋಜ, ಆರಂಭದಲ್ಲಿ ಬಿ ಸಿ ರೋಡಿನ ಹೃದಯ ಭಾಗದಲ್ಲಿ ಸರಕಾರದಿಂದ ಮಂಜೂರಾದ 0.10 ಎಕ್ರೆ ಜಮೀನಿನಲ್ಲಿ 80.42 ಲಕ್ಷ ಮೊಬಲಗಿನ ಕಛೇರಿ ಕಟ್ಟಡ ಹೊಂದಿದ್ದು, ಪ್ರಸ್ತುತ ಈ ಕಟ್ಟಡದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಿ ಸಿ ರೋಡು ಶಾಖೆ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಹಿತ ಹಲವು ವಾಣಿಜ್ಯ ಸಂಸ್ಥೆಗಳಿದ್ದು, ಎರಡನೇ ಮಹಡಿಯಲ್ಲಿ ವಾಣಿಜ್ಯ ತೆರಿಗೆ ಇಲಾಖಾ ಕಚೇರಿಯು ಬಾಡಿಗೆಗೆ ಕಾರ್ಯನಿರ್ವಹಿಸುತ್ತಿದೆ. ಸದ್ರಿ ವ್ಯವಹಾರ ಸಂಬಂಧಿ ಕೇಂದ್ರಗಳಿಂದ ಸುಮಾರು 3 ಲಕ್ಷದವರೆಗೆ ಮಾಸಿಕ ಬಾಡಿಗೆಯನ್ನು ಪಡೆದುಕೊಳ್ಳಲು ಪ್ರಸ್ತುತ ಹೊರ ಹೋಗುವ ಆಡಳಿತ ಮಂಡಳಿಯು ಮಾಡಿರುವ ಪಾರದರ್ಶಕ ವ್ಯವಸ್ಥೆ ಮತ್ತು ಆಯ್ಕೆಗಳೇ ಕಾರಣವಾಗಿರುತ್ತದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖ ಬಂಗೇರ, ಲೋಲಾಕ್ಷಿ ಶೆಟ್ಟಿ, ವಿಜಯಾನಂದ, ಸುಂದರ ಪೂಜಾರಿ, ಲಿಂಗಪ್ಪ ಪೂಜಾರಿ, ಲತಾ, ರಾಜೇಶ್ ಬಾಳೆಕಲ್ಲು ಉಪಸ್ಥಿತರಿದ್ದರು.
0 comments:
Post a Comment