ಪುತ್ತೂರು, ಸೆಪ್ಟೆಂಬರ್ 17, 2025 (ಕರಾವಳಿ ಟೈಮ್ಸ್) : 3 ವರ್ಷಗಳ ಹಿಂದೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ಯುವತಿಗೆ ಕಿರುಕುಳ ನೀಡಿದ ಆರೋಪಿಗೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಆರೋಪಿಯನ್ನು ಮಾಡನ್ನೂರು ಗ್ರಾಮದ ಮೊಹಮ್ಮದ್ ಸತ್ತಾರ್ ಎಂದು ಹೆಸರಿಸಲಾಗಿದೆ. ಈತ 2022ರ ಎಪ್ರಿಲ್ 25 ರಂದು ಸುಳ್ಯದಿಂದ ಪುತ್ತೂರಿಗೆ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ಪಕ್ಕದಲ್ಲಿ ಕುಳಿತಿದ್ದ ಯುವತಿಗೆ ಲೈಂಗಿಕ ಕಿರಿಕುಳ ನೀಡಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸ್ ಠಾಣಾ ಪಿಎಸ್ಸೈ ಆಗಿದ್ದ ರಾಜೇಶ್ ಕೆ ವಿ ಅವರು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸದ್ರಿ ಪ್ರಕರಣದಲ್ಲಿ ಪ್ರಧಾನ ಹಿರಿಯ ಸಿವಿಲ್ ಮತ್ತು ಎ ಸಿ ಜೆ ಎಂ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪ್ರಕೃತಿ ಕಲ್ಯಾಣಪುರ್ ಅವರು ಆರೋಪಿಯ ಮೇಲೆ ಆರೋಪ ಸಾಬೀತಾಗಿದೆ ಎಂದು ನಾಲ್ಕು ತಿಂಗಳಗಳ ಕಾರವಾಸ ಮತ್ತು 10 ಸಾವಿರ ರೂಪಾಯಿ ದಂಡ ಹಾಗೂ ದಂಡ ನೀಡಲು ತಪ್ಪಿದಲ್ಲಿ ಒಂದು ತಿಂಗಳ ಕಾಲ ಹೆಚ್ಚುವರಿ ಕಾರಾಗೃಹ ಶಿಕ್ಷೆಯನ್ನು ವಿಧಿಸಿರುತ್ತಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾಗಿ ಶ್ರೀಮತಿ ಕವಿತಾ ಕೆ ಅವರು ವಾದಿಸಿದ್ದಾರೆ.
0 comments:
Post a Comment