ಮಂಗಳೂರು : ಎಸ್ಸಿ, ಎಸ್ಟಿ ಮುಖಂಡರ ಕುಂದು ಕೊರತೆ ಸಭೆ - Karavali Times ಮಂಗಳೂರು : ಎಸ್ಸಿ, ಎಸ್ಟಿ ಮುಖಂಡರ ಕುಂದು ಕೊರತೆ ಸಭೆ - Karavali Times

728x90

3 September 2025

ಮಂಗಳೂರು : ಎಸ್ಸಿ, ಎಸ್ಟಿ ಮುಖಂಡರ ಕುಂದು ಕೊರತೆ ಸಭೆ

ಮಂಗಳೂರು, ಸೆಪ್ಟೆಂಬರ್ 03, 2025 (ಕರಾವಳಿ ಟೈಮ್ಸ್) : ಮಂಗಳೂರು ತಾಲೂಕು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಜನಾಂಗದವರ ಕುಂದು ಕೊರತೆ ಸಮಿತಿ ಸಭೆ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನದಲ್ಲಿ ಫ್ಯಾನ್, ಕುರ್ಚಿಗಳು, ಸಿಂಟೆಕ್ಸ್ ಸೇರಿದಂತೆ ಇತರ ಮೂಲಭೂತ ವಸ್ತುಗಳು ಕಳ್ಳತನವಾಗಿದ್ದು, ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದ್ದರೂ ಕಳ್ಳರು ಇನ್ನೂ ಪತ್ತೆಯಾಗಿಲ್ಲ. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದಾಗ ಅಲ್ಲಿ ಕುಳಿತುಕೊಳ್ಳಲೂ ಕೂಡ ಕುರ್ಚಿಯ ವ್ಯವಸ್ಥೆ ಇಲ್ಲ. ಸಮುದಾಯದ ಜನರ ಒಳಿತಿಗೆ ಸರಿಯಾದ ವ್ಯವಸ್ಥೆ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಗಳು ಸರಿಯಾದ ಕ್ರಮ ಜರುಗಿಸಬೇಕು. 5 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಭವನದ ಸುತ್ತಲೂ ಆವರಣ ಗೋಡೆ, ಸಿಸಿ ಕ್ಯಾಮೆರಾ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ದಲಿತ ಮುಖಂಡ ಆನಂದ್ ಆಗ್ರಹಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಪ್ರತಿಕ್ರಿಯಿಸಿ,  ಭವನಕ್ಕೆ  ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸುರತ್ಕಲ್‍ನಲ್ಲಿರುವ ಅಂಬೇಡ್ಕರ್ ಭವನವು ಪಾಳು ಬಿದ್ದಿದ್ದು, ಸಮುದಾಯದವರಿಗೆ ಯಾವುದೇ ಕಾರ್ಯಕ್ರಮಕ್ಕೆ ಉಪಯೋಗವಿಲ್ಲದಂತಾಗಿದೆ. ಅಂಬೇಡ್ಕರ್ ಭವನಕ್ಕೆ ಹೋಗಲು ಸಮರ್ಪಕ ರಸ್ತೆ ಇಲ್ಲದಿರುವುದರಿಂದ ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಸೌಲಭ್ಯಗಳನ್ನು ಒದಗಿಸಲು ಕನಿಷ್ಠ 20 ಸೆಂಟ್ಸ್ ಜಮೀನು ಬೇಕಾಗಿರುತ್ತದೆ. 20 ಸೆಂಟ್ಸ್ ಜಮೀನು ಕನ್ವರ್ಷನ್ ಮಾಡಲು ತಹಶಿಲ್ದಾರ್ ಒಪ್ಪುತ್ತಿಲ್ಲ. ಇದನ್ನು ತಿದ್ದುಪಡಿಗೊಳಿಸಬೇಕು ಎಂದು ದಲಿತ ಮುಖಂಡ ಶೀನ ಸಲಹೆ ನೀಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಆರ್ಥಿಕ  ಸಹಾಯ ಪಡೆಯುವ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಬೇಕು ಎಂದು ಸಭೆಯಲ್ಲಿ ಸಂಘಟನೆಯ ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು  ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಾಹಿತಿ ನೀಡಿದರು.

ಇತರ ವರ್ಗದವರು ಡಿಸಿ ಮನ್ನಾ ಜಾಗವನ್ನು ಅತಿಕ್ರಮಣ ಮಾಡಿ ಮನೆ ನಿರ್ಮಿಸುತ್ತಿದ್ದು, ಈ ಬಗ್ಗೆ  ಕ್ರಮ ವಹಿಸುವಂತೆ ಮುಖಂಡರು ಆಗ್ರಹಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮಾತನಾಡಿ,  ಕೊರಗ ಸಮುದಾಯದ ಅಭಿವೃದ್ಧಿಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಸ್.ಟಿ ಸಮುದಾಯದವರಿಗೆ ಎಲ್ಲಾ ರೀತಿಯ ಆರೋಗ್ಯ, ಶಿಕ್ಷಣಕ್ಕೆ ಸಂಬಂಧಪಟ್ಟ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುತ್ತದೆ. ಈ ಬಗ್ಗೆ  ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.  

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ತಹಶೀಲ್ದಾರ್ ರಫೀಕ್ ಚೌದರಿ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಎಸ್ಸಿ, ಎಸ್ಟಿ ಮುಖಂಡರ ಕುಂದು ಕೊರತೆ ಸಭೆ Rating: 5 Reviewed By: karavali Times
Scroll to Top