ಮಂಗಳೂರು, ಸೆಪ್ಟೆಂಬರ್ 03, 2025 (ಕರಾವಳಿ ಟೈಮ್ಸ್) : ಹೊಸ ಆಹಾರ ಸಂಸ್ಕರಣೆ ಉದ್ಯಮ ಅಥವಾ ಕಿರು ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಬ್ಯಾಂಕುಗಳು ತ್ವರಿತವಾಗಿ ಸಾಲ ಮಂಜೂರಾತಿ ಮಾಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೂಚಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಮತ್ತು ಕೆಪೆಕ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದೊಂದಿಗೆ ಬುಧವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ಒಂದು ದಿನದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈಯಕ್ತಿಕ ಉದ್ದಿಮೆ, ಗೃಹ ಉತ್ಪಾದನೆ ಹಾಗೂ ಆಹಾರ ಸಂಸ್ಕರಣಾ ಉದ್ದಿಮೆ ಸೇರಿದಂತೆ ವಿವಿಧ ಕಿರು ಉದ್ಯಮಗಳಿಗೆ ನೆರವು ನೀಡಲು ಕೇಂದ್ರ ಸರಕಾರದ ಹಲವಾರು ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆದರೆ ಬ್ಯಾಂಕುಗಳು ಸಾಲ ಮಂಜೂರಾತಿಗೆ ಸತಾಯಿಸುತ್ತಿರುವ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದಲೇ ಯೋಜನೆಯ ಮೂಲ ಉದ್ದೇಶವೇ ಈಡೇರುವುದಿಲ್ಲ. ಈ ನಿಟ್ಟಿನಲ್ಲಿ ಬ್ಯಾಂಕುಗಳಲ್ಲಿ ಕಿರು ಆಹಾರ ಸಂಸ್ಕರಣೆ ಘಟಕಗಳ ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ನಡೆಸಬೇಕು ಎಂದವರು ಸೂಚಿಸಿದರು.
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯು ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ದೇಶಾದ್ಯಂತ ಈ ಯೋಜನೆಯಡಿ 2 ಲಕ್ಷ ಸಣ್ಣ ಉದ್ಯಮಶೀಲರನ್ನು ಹಣಕಾಸು ಬೆಂಬಲ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಸಂಸದ ಚೌಟ ಹೇಳಿದರು.
ಕೃಷಿ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾತನಾಡಿ, ಈ ಯೋಜನೆಯಡಿ ಗರಿಷ್ಠ 15 ಲಕ್ಷದ ಸಬ್ಸಿಡಿ ದೊರಕಲಿದೆ. ಕೇಂದ್ರ ಸರಕಾರದ 35% ಹಾಗೂ ರಾಜ್ಯ ಸರ್ಕಾರದ 15% ಪಾಲು ಇದೆ ಎಂದರು.
ಕಾರ್ಯಕ್ರಮದಲ್ಲಿ ಜಂಟಿ ಕೈಗಾರಿಕಾ ನಿರ್ದೇಶಕ ಗೋಕುಲದಾಸ್, ಕೆಪೆಕ್ ಅಧಿಕಾರಿ ಅರವಿಂದ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಕೃಷಿ ಉಪನಿರ್ದೇಶಕ ಕುಮುದಾ ಸ್ವಾಗತಿಸಿ, ಉಪನಿರ್ದೇಶಕ ಶಿವಶಂಕರ್ ದಾನೇಗೊಂಡಲ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment