ಪ್ರತಿಭಟನೆ ಪ್ರಜಾಪ್ರಭುತ್ವದ ಸೌಂದರ್ಯ, ವಿರೋಧ ಪಕ್ಷಗಳು ಅದನ್ನು ಮಾಡುವುದು ಅವರ ಹಕ್ಕು, ಅದಕ್ಕೆ ಆಡಳಿತ ಪಕ್ಷ ಉತ್ತರ ನೀಡಬಹುದು : ಅದನ್ನು ಅವರು ನೋಡಿಕೊಳ್ಳುತ್ತಾರೆ, ನಾನು ನೋ ಕಮೆಂಟ್ಸ್ ಎಂದ ಖಾದರ್
ಮಂಗಳೂರು, ಸೆಪ್ಟೆಂಬರ್ 16, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಇದ್ದ ಕೆಂಪುಕಲ್ಲಿನ ಸಮಸ್ಯೆ ಬಗೆಹರಿದಿದ್ದು, ಶೀಘ್ರದಲ್ಲೇ ಜನರಿಗೆ ಕಲ್ಲು ಸರಬರಾಜು ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ, ಮಂಗಳೂರು ಶಾಸಕ ಯು ಟಿ ಖಾದರ್ ಹೇಳಿದರು.
ನಗರದ ಸರ್ಕೀಟ್ ಹೌಸಿನಲ್ಲಿ ಸೆ 16 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿ, ಸಂಬಂಧಪಟ್ಟ ಕಲ್ಲು ಗಣಿಗಾರಿಕೆ ನಡೆಸುವವರೊಂದಿಗೆ ಸಲಹೆ ಪಡೆದು ಸಮಸ್ಯೆ ಪರಿಹಾರದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದು ಪರವಾನಿಗೆ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.
ನಿರ್ಧಾರಕ್ಕೆ ಕ್ಯಾಬಿನೆಟ್ ಅಸ್ತು ಎಂದಿದ್ದು, ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಿರುವ 53 ಮಂದಿಯ ಪೈಕಿ 25 ಮಂದಿಗೆ ಈಗಾಗಲೇ ಲೈಸನ್ಸ್ ಹಾಗೂ ಪರ್ಮಿಟ್ ನೀಡಲಾಗಿದೆ. ಉಳಿದ 25 ಮಂದಿಗೆ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಕೆಂಪು ಕಲ್ಲು ದರವನ್ನು ಕೂಡಾ ಸರಕಾರ ಪರಿಷ್ಕರಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಲ್ಲಿನ ದರ ಕೂಡಾ ಕಡಿಮೆಯಾಗಲಿದೆ ಎಂದ ಸ್ಪೀಕರ್, ಮುಂದೆ ಎಲ್ಲವೂ ಕಾನೂನುಬದ್ದವಾಗಿಯೇ ನಡೆಯಲಿದೆ ಎಂದರು. ಸರಕಾರದ ನಿರ್ಧಾರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಎಲ್ಲಾ ಜನಪ್ರತಿನಿಧಿಗಳಿಗೂ ಗೊತ್ತಿದೆ. ಕಲ್ಲು ಗಣಿಗಾರಿಕೆ ಕೆಲಸ ಮಾಡುವ ಮಂದಿಗೂ ಗೊತ್ತಿದೆ. ರಾಜಕೀಯ ಪ್ರೇರಿತವಾಗಿ ನಡೆಯುವ ಪ್ರತಿಭಟನಗಳಿಗೆ ಯಾವುದೇ ಕಮೆಂಟ್ ಮಾಡಲ್ಲ ಎಂದ ಖಾದರ್ ಪ್ರತಿಭಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯವಾಗಿದ್ದು, ಅದು ಅವರವರ ಸಾಂವಿಧಾನಿಕ ಹಕ್ಕಾಗಿದೆ. ವಿರೋಧ ಪಕ್ಷದ ಪ್ರತಿಭಟನೆಗೆ ಆಡಳಿತ ಪಕ್ಷ ಉತ್ತರ ನೀಡಬಹುದು. ಅದು ಆಡಳಿತ-ವಿರೋಧ ಪಕ್ಷಗಳಿಗೆ ಬಿಟ್ಟದ್ದು. ಅದನ್ನು ಅವರುಗಳು ನೋಡಿಕೊಳ್ಳುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಮಳೆ ನಿಂತ ತಕ್ಷಣ ರಸ್ತೆ ರಿಪೇರಿಗೆ ಕ್ರಮ
ದ.ಕ. ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ರಸ್ತೆಗಳು ಸಹಜವಾಗಿ ಹದಗೆಟ್ಟಿದೆ. ನಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಳೆ ನಿಂತ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದ ಸ್ಪೀಕರ್ ದೊಡ್ಡ ಹಾಗೂ ಗಂಭೀರ ಹೊಂಡಗಳಿಗೆ ತಕ್ಷಣ ತೇಪೆ ಹಾಕಿ ರಿಪೇರಿ ಮಾಡುವಂತೆ ಸೂಚಿಸಲಾಗಿದ್ದು, ದೊಡ್ಡ ಪ್ರಮಾಣದ ರಸ್ತೆ ಗುಂಡಿಗಳಿಂದ ಅನಾಹುತಗಳೇನಾದರೂ ಸಂಭವಿಸಿದರೆ ಸಂಬಂಧಪಟ್ಟ ಇಂಜಿನಿಯರುಗಳನ್ನೇ ಹೊಣೆಗಾರರಾಗಿ ಮಾಡಿ ಕೇಸ್ ಹಾಕಲು ಸೂಚಿಸಲಾಗಿದೆ. ಉಳಿದಂತೆ ಡಾಮರು ಪ್ಲಾಂಟ್ ಓಪನ್ ಆದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಮಳೆಗಾಲದಲ್ಲಿ ರಸ್ತೆಗಳು ಹದಗೆಟ್ಟಿದ್ಧು ಈ ಬಗ್ಗೆ ಸಾರ್ವಜನಿಕರೂ ಕೂಡಾ ಜಾಗೃತೆ ವಹಿಸಿ ಜವಾಬ್ದಾರಿ ಪ್ರದರ್ಶಿಸುವಂತೆ ಸ್ಪೀಕರ್ ಮನವಿ ಮಾಡಿದರು.
ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ತೊಕ್ಕೊಟ್ಟು-ಮುಡಿಪು ರಸ್ತೆ, ಅಬ್ಬಕ್ಕ ವೃತ್ತ-ಕೋಟೆಪುರ ರಸ್ತೆ, ಅಬ್ಬಕ್ಕ ವೃತ್ತ- ಕೋಡಿ ರಸ್ತೆ, ಕುತ್ತಾರು-ದೇರಳಕಟ್ಟೆ ಹಾಗೂ ಅಸೈಗೋಳಿ-ಮುದುಂಗಾರುಕಟ್ಟೆ ಮೊದಲಾದ ರಸ್ತೆಗಳ ಅಭಿವೃದ್ದಿಗೆ ಲಭ್ಯವಿರುವ ಅನುದಾನಗಳ ಜೊತೆಗೆ ಹೆಚ್ಚುವರಿಯಾಗಿ 90 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದ ಯುಟಿ ಖಾದರ್ ಜಿಲ್ಲೆಯ ರಸ್ತೆಗಳ ಸ್ಥಿತಿಗೆ ಸಂಬಂಧಪಟ್ಟಂತೆ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳುತ್ತಾರೆ ಎಂದರಲ್ಲದೆ ಮರಳು ಸಮಸ್ಯೆಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜೊತೆಯಾಗಿ ಕಾರ್ಯನಿರ್ವಹಿಸಿ ಶೀಘ್ರ ಪರಿಹಾರ ಕಲ್ಪಸಬೇಕಾಗಿದೆ ಎಂದರು. ಈಗಾಗಲೇ ಅಧಿಕಾರಿಗಳಿಂದ ಸೀಝ್ ಆಗಿರುವ ಮರಳನ್ನು ಆದ್ಯತೆ ಮೇರೆಗೆ ಸರಕಾರಿ ಅಭಿವೃದ್ದಿ ಕೆಲಸಗಳಿಗೆ ಒದಗಿಸಲು ಸೂಚಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರು ತಮಗೆ ಬೇಕಾಗುವಷ್ಟು ಮರಳನ್ನು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು. ನಂತರ ಮರಳು ಬಾಕಿ ಉಳಿದಲ್ಲಿ ಖಾಸಗಿ ವ್ಯಕ್ತಿಗಳ ಕಾಮಗಾರಿಗಳಿಗೆ ಹಂಚಲಾಗುವುದು ಎಂದವರು ತಿಳಿಸಿದರು.
ಜಾತಿ ಸಮೀಕ್ಷೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಸಹಕರಿಸಬೇಕು
ಸೆ 22 ರಿಂದ ಜಾತಿ ಗಣತಿ ಆರಂಭವಾಗಲಿದ್ದು, ಇದು ಸರ್ವರಿಗೂ ಅಗತ್ಯವಾಗಿರುವುದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ಮಾಡಬೇಕು ಎಂದ ಸ್ಪೀಕರ್ ಖಾದರ್ ಅಧಿಕಾರಿಗಳು ಮನೆ ಭೇಟಿ ವೇಳೆ ಪೂರ್ಣವಾಗಿ ಸಹಕಾರ ನೀಡಬೇಕು. ಪ್ರತಿ ಮನೆಯ ವಿವರ ಸಂಗ್ರಹಿಸಲು ಸುಮಾರು 40 ನಿಮಿಷದಿಂದ 1 ಗಂಟೆವರೆಗೆ ಅವಧಿ ಬೇಕಾಗಲಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಈ ಬಗ್ಗೆ ಪೂರ್ವ ಮಾಹಿತಿ ಪಡೆದುಕೊಂಡು ಅರ್ಜಿ ಫಾರಂ ಮೊದಲೇ ಪಡೆದುಕೊಂಡು ಸ್ಟಡಿ ಮಾಡಿ ಆ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
0 comments:
Post a Comment