ಬಂಟ್ವಾಳ, ಸೆಪ್ಟೆಂಬರ್ 15, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಬಳಿ ಟ್ಯಾಂಕರೊಂದು ಹೆದ್ದಾರಿ ಡಿವೈಡರಿಗೆ ಡಿಕ್ಕಿ ಹೊಡೆದು ನಿಂತ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಮೆಲ್ಕಾರ್ ಕಡೆಯಿಂದ ಬಂದ ಭಾರತ್ ಪೆಟ್ರೋಲಿಯಂ ಸಾಗಾಟದ ಟ್ಯಾಂಕರ್ ಪಾಣೆಮಂಗಳೂರು ಹೊಸ ಸೇತುವೆ ಬಳಿ ರಸ್ತೆ ತಿರುವು ಪಡೆದಿರುವುದು ಚಾಲಕನ ಗಮನಕ್ಕೆ ಬಾರದೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹೊಸ ಸೇತುವೆ ಬಳಿ ಮತ್ತೊಂದು ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಇಲ್ಲಿನ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸೇತುವೆ ಹತ್ತಿರದಲ್ಲೇ ಹೆದ್ದಾರಿಗೆ ಡೈವರ್ಸನ್ ಕೊಡಲಾಗಿದೆ. ಆದರೆ ಈ ರಸ್ತೆ ಕವಲೊಡೆಯುವ ಸ್ಥಳದಲ್ಲಿ ಸಮರ್ಪಕ ಸೂಚನಾ ಫಲಕ ಅಳವಡಿಸದ ಕಾರಣ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನ ಚಾಲಕರು ಯಾಮಾರುವುದು ಸಹಜವಾಗಿದೆ. ಅಲ್ಲದೆ ಹೆದ್ದಾರಿಯಲ್ಲಾಗಲೀ ಸೇತುವೆಯಲ್ಲಾಗಲೀ ದಾರಿ ದೀಪಗಳೂ ಕೂಡಾ ಈ ಪ್ರದೇಶದಲ್ಲಿ ಇಲ್ಲದೇ ಇರುವುದರಿಂದ ರಾತ್ರಿ ವೇಳೆ ಗಾಢ ಕತ್ತಲು ಕೂಡಾ ಆವರಿಸುತ್ತಿರುವುದೂ ಆಕ್ಸಿಡೆಂಡ್ ಸ್ಪಾಟ್ ಆಗುತ್ತಿರುವ ಬಗ್ಗೆಯೂ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಘಟನೆಯಿಂದ ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕರಿಬ್ಬರೂ ಕೂಡಾ ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಹೆದ್ದಾರಿ ಡಿವೈಡರ್ ಕಲ್ಲುಗಳು ತುಂಡಾಗಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
























0 comments:
Post a Comment