ಸೃಷ್ಟಿ-ಸ್ಥಿತಿ-ಲಯಗಳ ನಡುವಿನ ಉಯ್ಯಾಲೆಯಾಡುವ ಜಗದ ಸೋಜಿಗದ ಅನಾವರಣ : ಯಕ್ಷಗಾನ ಕಲಾರಂಗದ ವಿಭಿನ್ನ ಪ್ರಯೋಗ, ವಿನಮ್ರ ಪ್ರಯತ್ನ ಶ್ರೀದೇವಿ ಮಹಾತ್ಮೆ - Karavali Times ಸೃಷ್ಟಿ-ಸ್ಥಿತಿ-ಲಯಗಳ ನಡುವಿನ ಉಯ್ಯಾಲೆಯಾಡುವ ಜಗದ ಸೋಜಿಗದ ಅನಾವರಣ : ಯಕ್ಷಗಾನ ಕಲಾರಂಗದ ವಿಭಿನ್ನ ಪ್ರಯೋಗ, ವಿನಮ್ರ ಪ್ರಯತ್ನ ಶ್ರೀದೇವಿ ಮಹಾತ್ಮೆ - Karavali Times

728x90

4 September 2025

ಸೃಷ್ಟಿ-ಸ್ಥಿತಿ-ಲಯಗಳ ನಡುವಿನ ಉಯ್ಯಾಲೆಯಾಡುವ ಜಗದ ಸೋಜಿಗದ ಅನಾವರಣ : ಯಕ್ಷಗಾನ ಕಲಾರಂಗದ ವಿಭಿನ್ನ ಪ್ರಯೋಗ, ವಿನಮ್ರ ಪ್ರಯತ್ನ ಶ್ರೀದೇವಿ ಮಹಾತ್ಮೆ

- ಸುನಿಲ್ ಪಲ್ಲಮಜಲು 


ಇತ್ತೀಚೆಗೆ ಉಡುಪಿಯ ಐವೈಸಿ ಸಭಾಂಗಣದಲ್ಲಿ ಕಲಾರಂಗದ ಆಯೋಜನೆಯಲ್ಲಿ “ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಪ್ರಸಂಗದ ವಿಭಿನ್ನ ಪ್ರದರ್ಶನ ನಡೆಯಿತು. ಈ ಪ್ರದರ್ಶನದ ಹಿನ್ನೆಲೆಯಲ್ಲಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಲಾಗಿತ್ತು. ಸೀಮಿತ ಪ್ರೇಕ್ಷಕರನ್ನೊಳಗೊಂಡ ಕಾರ್ಯಕ್ರಮ ಇದಾಗಿತ್ತು. `ಥಿಯೇಟರ್ ಯಕ್ಷ’ ಸದಸ್ಯನಾಗಿ ಮತ್ತು ಈ ಪ್ರಸಂಗದ ಪೂರ್ವತಯಾರಿಗಾಗಿ ಶ್ರಮಿಸಿದ ತಂಡದಲ್ಲಿ  ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ಈ ಬರಹದ ಮೂಲಕ ಹಂಚಿಕೊಳ್ಳುತ್ತಿದ್ದೇನೆ.

ಉಡುಪಿಯ ಯಕ್ಷಗಾನ ಕಲಾರಂಗ ಆರಂಭದ ದಿನಗಳಿಂದಲೂ ಯಕ್ಷಗಾನದ ಕುರಿತು ಗಂಭೀರವಾಗಿ ತೊಡಗಿಸಿಕೊಂಡಿರುವ ಸಂಸ್ಥೆ. ಕಲೆಗೆ ಮತ್ತು ಕಲಾವಿದರಿಗೆ ಕಾಮಧೇನುವಿಂತಿರುವ ಅಪರೂಪದ ಸಂಘಟನೆಯಿದು. ಅನೇಕ ವರ್ಷಗಳಿಂದ ಈ ಸಂಸ್ಥೆಯು ವಿಭಿನ್ನ ಪ್ರಯೋಗಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಜುಲೈ 6, 2025 ರಂದು ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ ಪ್ರಸ್ತುತಿಗೊಳಿಸಿದ ‘ಶ್ರೀದೇವಿ ಮಹಾತ್ಮೆ’ ಪ್ರಸಂಗವು ವಿಭಿನ್ನ ಪರಿಕಲ್ಪನೆಯೊಂದಿಗೆ ಪ್ರಸ್ತುತಿಗೊಂಡಿರುವುದು ಯಕ್ಷಗಾನ ಕಲಾರಂಗದ ಪ್ರಯೋಗಶೀಲತೆಗೆ ಸಾಕ್ಷಿಯಾಗಿದೆ. ಈ ಪ್ರದರ್ಶನದ ಪರಿಕಲ್ಪನೆ ಮತ್ತು ನಿರ್ದೇಶನ ಪೃಥ್ವೀರಾಜ ಕವತ್ತಾರು ಅವರದಾಗಿತ್ತು. ಥಿಯೇಟರ್ ಯಕ್ಷಗಾನದ ಸಕ್ರಿಯ ಸದಸ್ಯರಾಗಿರುವ ಈ ಲೇಖಕ, ಸ್ಕಂದಕೊನ್ನಾರ್, ನಾಗೇಶ ಬೈಲೂರು, ವಿಶ್ವಾಸ್ ಕರ್ಬೆಟ್ಟು ಸೇರಿದಂತೆ ಹಲವರು ವಿಭಿನ್ನ ಪರಿಕಲ್ಪನೆ ರೂಪು ಪಡೆಯಲು ಶ್ರಮಿಸಿದರು. 

‘ಥಿಯೇಟರ್ ಯಕ್ಷಗಾನ’ದ ಕಲಾವಿದರು ಕರ್ನಾಟಕ ಮತ್ತು ಭಾರತದಾದ್ಯಂತ ಪ್ರಯೋಗಾತ್ಮಕ ಪ್ರದರ್ಶನಗಳನ್ನು ನೀಡುತ್ತ ಬಂದಿದ್ದು ಇಲ್ಲಿನ ಪ್ರಯೋಗಗಳು ಭಾವನಾತ್ಮಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಆಶಯವನ್ನು ಹೊಂದಿದವುಗಳು. ಯಕ್ಷಗಾನೀಯತೆಯನ್ನು ಉಳಿಸಿಕೊಂಡು, ಹೊಸ ರಂಗ ನಡೆ, ಸಾಧ್ಯತೆಗಳ ಮೂಲಕ ‘ರಂಗಕೃತಿ’ಗಳನ್ನು ಇಮೋಶನಲ್ ಮತ್ತು ಇಂಟಲೆಕ್ಟ್‍ನ ಎರಡೂ ನೆಲೆಗಳಲ್ಲಿ ಮರು ನಿರೂಪಿಸಲಾಗುತ್ತದೆ. ಆಹಾರ್ಯದಲ್ಲಿ ಪರಿಷ್ಕಾರ, ರಂಗಗತಿ ನಿರ್ಧಾರ, ಬೆಳಕಿನ ವಿನ್ಯಾಸಗಳಂಥ ಅಂಶಗಳನ್ನು ಬಳಸಿಕೊಂಡು ‘ರಂಗಸೌಂದರ್ಯ’ ಕ್ಕೆ ಒತ್ತು ನೀಡುವಂತೆಯೇ ಪ್ರಸಂಗ ಮತ್ತು ಪಾತ್ರಗಳ ತಾತ್ತ್ವಿಕ ಆಶಯಗಳಿಗೆ ಪ್ರಾಧಾನ್ಯವನ್ನು ನೀಡಲಾಗುತ್ತದೆ. ಶ್ರೀದೇವಿ ಮಹಾತ್ಮೆಯೂ ಅಂತಹದ್ದೊಂದು ಮಾದರಿ ಪ್ರದರ್ಶನವಾಗಿ ಗಮನ ಸೆಳೆಯಿತು. ಪ್ರಸಂಗ ತಯಾರಿಯ ಆರಂಭದಲ್ಲಿ ನಾವು ಎಂದಿನಂತೆ ಇದು ಒಂದು ಪ್ರಾಯೋಗಿಕ ಪ್ರ್ರಯತ್ನ ಎಂಬ ಭಾವನೆಯಲ್ಲಿ ಇz್ದÉೀವಾದರೂ ಮುಕ್ತಾಯದ ಹೊತ್ತಿಗೆ ಒಂದು ಬಗೆಯ ‘ರೋಮಾಂಚ’ದÀ ಅನುಭವವಾಯಿತು. ಹೀಗೂ ಒಂದು ಪ್ರಸಂಗವನ್ನು ಕಟ್ಟಬಹುದಲ್ಲ ಎಂದು ಯೋಚಿಸಿ ಬೆರಗಾಯಿತು. ನಾನು ಪ್ರದರ್ಶನದ ಭಾಗವೇ ಆಗಿz್ದÉೀನಾದ್ದರಿಂದ ಪ್ರದರ್ಶನ ‘ಒಳ್ಳೆಯದಾಗಿದೆ-ಕೆಟ್ಟದಾಗಿದೆ’, ‘ಹಾಗಿರಬೇಕಿತ್ತು, ಹೀಗಿರಬೇಕಿತ್ತು’ ಎಂಬೆಲ್ಲ ಸರಳ ವ್ಯಾಖ್ಯೆಗಳನ್ನು ನೀಡುವುದಿಲ್ಲ, ಈ ಪ್ರಸಂಗ ನನ್ನೊಳಗೆ ಪ್ರೇರೇಪಿಸಿದ ಯೋಚನೆಗಳನ್ನಷ್ಟೇ ಇಲ್ಲಿ ಹಂಚಿಕೊಳ್ಳುತ್ತೇನೆ. 

“ಶ್ರೀ ದೇವಿ ಮಹಾತ್ಮೆ” ಪ್ರಸಂಗವು ದುರ್ಗಾಸಪ್ತಶತೀ ಕೃತಿಯಾಧಾರಿತವಾದದ್ದು. ಇದು ಪಾರಾಯಣದ ಮೂಲಕ ಜನಪ್ರಿಯವಾದ ಕೃತಿ. ಇದನ್ನು `ದೇವಿಮಹಾತ್ಮೆ’ ಎಂಬ ರಂಗ ಕೃತಿಯನ್ನಾಗಿ ಮಾಡಿದ ಅಂದಿನ ಯಕ್ಷಗಾನ ಕವಿಗಳ ಪ್ರತಿಭೆ ಅಸಾಮಾನ್ಯವಾದುದೇ. ಇಲ್ಲಿ ನಿರ್ದೇಶಕರು ಅಗರಿ ಶ್ರೀನಿವಾಸ ಭಾಗವತರ ಪ್ರತಿಯನ್ನು ಪ್ರಧಾನವಾಗಿ ಬಳಸಿಕೊಂಡಿದ್ದಾರೆ. ಅಗತ್ಯವೆನಿಸಿದಲ್ಲಿ ಪೂರಕ ಪದ್ಯಗಳನ್ನು ವಿರಚಿಸಿದ್ದಾರೆ. ಅರ್ಥವಿಸ್ತಾರದ ಸಾಧ್ಯತೆಗಳನ್ನು ತಾವೇ ಬರೆದಿದ್ದಾರೆ. ಸಾಮಾನ್ಯವಾಗಿ ಜನಪ್ರಿಯ ಪೌರಾಣಿಕ ಕಥಾವಸ್ತುಗಳನ್ನು, ಅದರಲ್ಲಿಯೂ ಹರಕೆಯಾಟವಾಗಿ ಹೆಚ್ಚು ಕರಾವಳಿಯ ಜನಮನವನ್ನು ವ್ಯಾಪಿಸಿರುವ `ಶ್ರೀದೇವಿಮಹಾತ್ಮೆ’ ಯಂತಹ ಪ್ರಸಂಗದ ಕಥಾವಸ್ತು, ಪಾತ್ರಗಳ ಸ್ವಭಾವ, ವೈಶಿಷ್ಟ್ಯಗಳು ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿರುವುದರಿಂದ `ರಂಗಕೃತಿ’ಯನ್ನು ಸೃಜನಶೀಲವಾಗಿ ಮರು ನಿರೂಪಿಸುವುದು ಒಂದು ಸವಾಲು. ಅದಕ್ಕೆ ಕಲ್ಪನೆಯ ಕೌಶಲ ಅಗತ್ಯ. ಇನ್ನು ಈ ಪ್ರಸಂಗ ರಚನೆಗೊಂಡು ಪ್ರದರ್ಶನಕ್ಕೆ ಅಣಿಯಾದದ್ದೇ ಯಕ್ಷಗಾನವು ನಾಟಕೀಯ ಅಂಶಗಳನ್ನು ಆವಾಹಿಸಿಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ. ಇಲ್ಲಿನ ಕೆಲವು ಪಾತ್ರಗಳ ವೇಷಭೂಷಣ ನಾಟಕೀಯವಾಗಿಯೇ ರೂಢಿಗೊಂಡಿವೆ. ಹಾಗಿರುವಾಗ ಪ್ರೇಕ್ಷಕ ವಲಯದಲ್ಲಿ ಸ್ಥಿರಗೊಂಡ ಚಿತ್ರಣವನ್ನು ಸಂಪೂರ್ಣವಾಗಿ ವೇಳಭೂಳಣದಲ್ಲಿ ತಕ್ಷಣಕ್ಕೆ ಬದಲಾಯಿಸುವುದು ತುಸು ಕಷ್ಟದ ಕೆಲಸವೇ. ಆದರೂ ಕೆಲವೊಂದೆಡೆ `ಬದಲಾವಣೆ’ಗೆ ಪ್ರಯತ್ನಿಸಲಾಗಿದೆ. ಮೂಲ ಕಥಾನಕದ ಬಾಹ್ಯ ವಿವರಗಳನ್ನು ಹೆಚ್ಚು ಮಾರ್ಪಡಿಸದೆ, ಅಂತರಂಗ ದರ್ಶನದಲ್ಲಿ ಹೊಸತನ್ನು ಕಾಣಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದ್ದುದನ್ನು ಇದ್ದಂತೆಯೇ, ನಡೆದುದನ್ನು ನಡೆದಂತೆಯೇ ಚಿತ್ರಿಸಬೇಕು ಎಂಬ ಪ್ರಯತ್ನಕ್ಕೆ ಹೋಗದೆ ಇದ್ದದ್ದೂ ನಡೆದದ್ದೂ ತನಗೆ ಹೇಗೆ ಗೋಚರಿಸಿತೋ, ಆ ತನ್ನ ಅನುಭವಕ್ಕೆ ಆಕಾರ ಕಲ್ಪನೆ ಮಾಡುವ ಪ್ರಯತ್ನದ ರೀತಿಯನ್ನು ಕುವೆಂಪು ‘ಪ್ರತಿಮಾ ವಿಧಾನ’ವೆಂದು ಹೇಳಿದ್ದಾರೆ. ಕವತ್ತಾರು ಅವರ  `ಥಿಯೇಟರ್ ಯಕ್ಷ’ದ ಪ್ರಯೋಗಗಳು ಈ ಬಗೆಯವೇ ಆಗಿವೆ.

ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ ಪ್ರಸಂಗದ ಪೂರ್ವಭಾವಿಯಾಗಿ  ಪೃಥ್ವೀರಾಜ್ ಕವತ್ತಾರ್ ತಮ್ಮ ಯೋಚನೆಗಳನ್ನು ಥಿಯೇಟರ್ ಯಕ್ಷದ ಸದಸ್ಯರೊಂದಿಗೆ ಹಂಚಿಕೊಂಡು ಚರ್ಚಿಸಿದರು. ಕಲಾವಿದರಿಗೆ ಪ್ರಸಂಗ ‘ಗತಿ’ಯನ್ನು ಹೇಳಿಕೊಡುವ ಹೊಣೆಯನ್ನು ನಾವು ಹಂಚಿಕೊಂಡೆವು. ಕಲಾವಿದರನ್ನು ತಾಲೀಮಿಗೆ ಕರೆದು ಪ್ರಸಂಗದ ನಡೆಯನ್ನು ಅಭ್ಯಸಿಸಿದೆವು. ತಾಲೀಮಿನಲ್ಲಿಯೂ ಒಂದಷು ಪರಿವರ್ತನೆಗಳಾದವು. ಕಲಾವಿದರೆಲ್ಲರೂ ಯುವ ವೃತ್ತಿಪರರೇ ಆದುದರಿಂದ ಹೊಸ ನಡೆಗೆ ಆತುಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ, ಯುವಕಲಾವಿದರಲ್ಲಿ ಕಲಿಯುವ ಹುಮ್ಮಸ್ಸು ಜಾಗೃತವಾಗಿದೆ ಎಂಬ ಅರಿವು ನಮಗಾಯಿತು. ನಮಗೂ ಇದೊಂದು ಹೊಸ ಅನುಭವ, ನಾವೂ ಅವರಿಂದ ಕಲಿತೆವು. 

ಈ ಪ್ರಸಂಗವು ಶಕ್ತಿ ದೇವತೆಯ ಆರಾಧನೆಯ ಹಿನ್ನೆಲೆಯಿಂದ ರಚನೆಗೊಂಡಿದೆ. ಇಲ್ಲಿ ದೇವಿಯ ಪಾರಮ್ಯವನ್ನು ಹೇಳುವುದೇ ಕಥೆಯ ಮುಖ್ಯ ಉದ್ದೇಶ. ಹಾಗಾಗಿ, ಈ ಪ್ರಯೋಗವನ್ನೂ ದೇವಿಯನ್ನು ಕೇಂದ್ರೀಕರಿಸಿಕೊಂಡೇ ಪುನರ್ ರಚಿಸಲಾಯಿತು. ಅನ್ಯ ಪುರಾಣಗಳಿಂದ ಆಯ್ದುಕೊಂಡಿದ್ದ ಬ್ರಹ್ಮ ವಿಷ್ಣು ಮಹೇಶ್ವರ ಸಂವಾದದ ಪ್ರಕರಣವನ್ನು ಇಲ್ಲಿ ವಿಶಿಷ್ಟವಾಗಿ ಚಿತ್ರಿಸಲಾಯಿತು. ವಿದ್ಯುನ್ಮಾಲಿ, ರಕ್ತಬೀಜಾದಿ ಪಾತ್ರಗಳು ಸಪ್ತಶತಿಯಲ್ಲಿ ಪ್ರಕಟಗೊಂಡಿರುವ ಬಗೆ ಯಕ್ಷಗಾನ ಪ್ರಸಂಗಕ್ಕಿಂತ ಭಿನ್ನ. ಆರಾಧನ ಕೇಂದ್ರಿತವಾದ ಕೃತಿಯನ್ನು ಮನೋರಂಜನಾತ್ಮಕದ ಮಾಧ್ಯಮದಲ್ಲಿ ಬಳಸುವಾಗ ಏನೆಲ್ಲ ಬದಲಾವಣೆ ಮಾಡಬೇಕೋ ಅದನ್ನು ಹಿಂದಿನ ಪ್ರಸಂಗಕರ್ತರು ಮಾಡಿದ್ದರು. ಅಗರಿ ಶ್ರೀನಿವಾಸ ಭಾಗವತರಂತೂ ಆಧುನಿಕ ರಂಗಕಲ್ಪನೆ ಇರುವ ನಿರ್ದೇಶಕರೇ ಸರಿ. ಅವರ ಪ್ರಸಂಗದ ಮೂಲ ಆಶಯವನ್ನೇ ಇಲ್ಲಿ ವಿಸ್ತರಿಸಲಾಯಿತು. ಸೃಷ್ಟಿ ಸ್ಥಿತಿ, ಲಯದ ಶ್ರೇಷ್ಠತೆಯ ವಾಗ್ವಾದದಲ್ಲಿ ಲಯದ ಅಂತರಂಗದಲ್ಲಿಯೇ ಸೃಷ್ಟಿಯ ಮೂಲ ಅಡಗಿದೆ, ಹುಟ್ಟಿನಲ್ಲಿಯೇ ಸಾವಿನ ದಿನವೂ ಬರೆದಿದೆ- ಎಂಬ ಕಾರಣಕ್ಕಾಗಿ ಯಾವುದೂ ದೊಡ್ಡದಲ್ಲ, ಯಾವುದೂ ಸಣ್ಣದಲ್ಲ ಎಂಬ ನಿಲುಮೆಯಲ್ಲಿ ಮೂರೂ ಪಾತ್ರಗಳನ್ನು ಚಿತ್ರಿಸಲಾಯಿತು. ಮೂರೂ ಪಾತ್ರಗಳು ಒಳಗೆ ಸರಿಯದೆ ಸಂವಾದದ ಕೊನೆಯವರೆಗೂ ರಂಗದಲ್ಲಿಯೇ ಸಕ್ರಿಯವಾಗಿರುವುದು ಒಂದು ಹೊಸ ರಂಗತಂತ್ರ. ಈ ಜಗತ್ತಿನಲ್ಲಿ ಹುಟ್ಟಿದ ಎಲ್ಲರಿಗೂ ಒಂದು ಅಸ್ಮಿತೆಯ ಪ್ರಶ್ನೆ ಇದೆ, ಅದು ಬ್ರಹ್ಮ, ವಿಷ್ಣು, ಈಶರಿಗೂ ಇದೆ. ‘ನಾನು ಯಾರು?’, ‘ನಾನು ಏನು ಮಾಡಬೇಕು’ ಮೊದಲಾದ ಸರಳ ಪ್ರಶ್ನೆಗಳ ಮೂಲಕವೇ ಘನವಾದ ತಾತ್ವಿಕತೆಯನ್ನು ಪ್ರಸ್ತುತಿಪಡಿಸುವುದು ಈ ದೇವಿಮಹಾತ್ಮೆಯ ಪೂರ್ವಭಾಗದ ಆಶಯ. ವಿಷ್ಣುವನ್ನು ‘ಯೋಗಮಾಯೆ’ ಯಾಗಿ ಆವರಿಸುವ ದೇವಿ, ಮಧುಕೈಟಭರ ವಧಾಕಾಲದಲ್ಲಿ ‘ಮಹಾಶಕ್ತಿ’ ಯಾಗಿರುತ್ತಾಳೆ. ಅವರೊಳಗಿನ ತಾನೇ ಮೇದಿನಿಯಾಗುತ್ತಾಳೆ. ದೇವಿಮಹಾತ್ಮೆಯ ಕಥಾನಕದಲ್ಲಿ ಅವಳು ಮಹಾಲಕ್ಷ್ಮೀಯಾಗುತ್ತಾಳೆ, ಮಹಾಸರಸ್ವತಿಯಾಗುತ್ತಾಳೆ. 

ಮಾಲಿನಿಯ ರೂಢಿಯ ರಂಗನಡೆಯ ಜೊತೆಗೆ ಸುಪಾರ್ಶ್ವಕನನ್ನೂ ಕಾಣಿಸಿರುವುದೊಂದು ವಿಶೇಷ. ಇವೆರಡೂ ಒಂದೇ ಪ್ರಕೃತಿಯಲ್ಲಿ ಭಿನ್ನ ಗಮ್ಯಗಳನ್ನು ಅರಸುವ ವೈರುಧ್ಯ ಮನೋಸ್ಥಿತಿಯ ಪಾತ್ರಗಳಾದವು. ಮಾಲಿನಿಗೆ ಲೌಕಿಕವಾದ ಜನನಿಯಾಜ್ಞೆ ; ಶಾಕ್ತ ಮುನಿ ಸುಪಾಶ್ರ್ವಕನಿಗೆ ಅಲೌಕಿಕವಾದ ಜನನಿಯಾಜ್ಞೆ!

ಯP್ಷÀರಾಜ ಪಿಂಗಳಾಕ್ಷ ಪಾತ್ರದ ಮಹತ್ವವನ್ನು ಕಾಣಿಸುವುದಕ್ಕಾಗಿ ನಿರ್ದೇಶಕರು ಪಿಂಗಳಾP್ಷÀ ಪಾತ್ರದ ಒಡ್ಡೋಲಗಕ್ಕೆ ಹೊಸ ಸಾಹಿತ್ಯವನ್ನು ಬರೆದು ಹೊಸ ನಡೆಯನ್ನು ರೂಪಿಸಿದ್ದರು. ಮಹಿಷಾಸುರನ ಆಹಾರ್ಯದಲ್ಲಿ ರೂಪಾಂತರ ಮಾಡುವ ಜೊತೆಗೆ, ರಂಗನಡೆಯಲ್ಲೂ ಗಂಭೀರಗತಿಯನ್ನು ಅಳವಡಿಸಲಾಗಿತ್ತು. ಅಷ್ಟಭುಜೆ ಮತ್ತು ಕೌಶಿಕೆಯ ಆಹಾರ್ಯಕ್ಕೆ ಮತ್ತು ರಂಗನಡೆಗೆ ಸಂಬಂಧಿಸಿ ನಾವು ಸುದೀರ್ಘವಾಗಿ ಚರ್ಚಿಸಿದೆವು. ನಿರ್ದೇಶಕರ ಸೂಚನೆಯಂತೆ ನಾಗೇಶ್ ಬೈಲೂರು ಅವರು ದೇವಿಪಾತ್ರವÀನ್ನು ಕಸೆಸೀರೆಯ ಉಡುಗೆಯೊಂದಿಗೆ ರೂಪಿಸುವಲ್ಲಿ ಸಹಕರಿಸಿದರು.

ಉತ್ತರಾರ್ಧದ ಕಥಾನಕದಲ್ಲಿ ದೇವತೆಗಳಿಗೆ ಅಭಯವನ್ನು ನೀಡುವ ದೇವಿ ಕನಕದುಯ್ಯಾಲೆಯನ್ನು ತೂಗುವ ಚಿತ್ರಣವನ್ನು ಅಭಿನಯದ ಮೂಲಕವೇ ತೋರಿಸಲಾಯಿತು. ಭಯಭೀತÀ ಕೂಸು ತಾಯ ಸೆರಗೊಳಗೆ ಮರೆಯಾಗುವಂತೆ ಇಲ್ಲಿ ದೇವತೆಗಳೂ ದೇವಿಯ ಆಶ್ರಯದಲ್ಲೇ ಮರೆಗೊಂಡು ದೇವಿಯ ಉಯ್ಯಾಲೆ ತೂಗುತ್ತಾರೆ. ಇಲ್ಲಿ ‘ಉಯ್ಯಾಲೆ’ ಎನ್ನುವುದು ಪ್ರತಿಮೆಯಾಗಿ ಬಳಕೆಯಾಗಿವೆ. ಬಹುಶÀಃ ದೇವಿ ಉಯ್ಯಾಲೆಯಲ್ಲಿ ಕುಳಿತು ಜೀಕುವುದು ಯಕ್ಷಗಾನ ಕವಿಗಳ ಕಲ್ಪನೆಯೇ ಇರಬೇಕು! ಅಥವಾ ಇದಕ್ಕೆ ಆಕರ ಕೃತಿ ಬೇರೆ ಇರಲೂ ಬಹುದು. ಇಹ-ಪರದ ಉಯ್ಯಾಲೆಯಲ್ಲಿ ಅಂದೋಲನಗೈಯುವ ಆದಿಮಾಯೆ ಚಂಡ-ಮುಂಡರ ಮನಸ್ಸಿನಲ್ಲಿ ದ್ವಂದ್ವದ ಜೋಕಾಲಿಯನ್ನು ತೂಗುತ್ತಾಳೆ. ಸ್ವರ್ಗಕ್ಕೆ ಹಾರಿ ಪಾತಾಳಕ್ಕೆ ಇಳಿಯುವ ತೂಗುಯ್ಯಾಲೆಯ ದೇವಿಯನ್ನು ಕಂಡ ಚಂಡ-ಮುಂಡರು ಈ ವಿಚಾರವನ್ನು ಶುಂಭನಿಶುಂಭರಿಗೆ ತಲುಪಿಸುತ್ತಾರೆ. ಅದು ಸುಗ್ರೀವ, ಧೂಮ್ರಾಕ್ಷ, ರಕ್ತಬೀಜರಿರುವ ಶುಂಭನಿಶುಂಭರ ತುಂಬಿದ ಸಭೆ! ಚಂಡಮುಂಡರಿಂದ ವಾರ್ತೆ ಕೇಳಿದ ಮೂವರೂ ಶುಂಭನಿಗೆ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಶುಂಭನಾಜ್ಞೆಯನ್ನು ಶಿರದಲ್ಲಿ ಹೊರುವ ಖಳರು ಏಕಮತವಾದರೂ ಭಿನ್ನಪಥದ ಮೂಲಕ ಕದಂಬ ಕಾಂತಾರದೆಡೆಗೆ ಹೊರಡುತ್ತಾರೆ. ವೃದ್ಧ ಸಚಿವ ಸುಗ್ರೀವನ ಭಕ್ತಿಗೆ ಮರುಬದುಕನ್ನೂ, ಯುವಕರಾದ ಚಂಡ-ಮುಂಡ, ಧೂಮ್ರಾಕ್ಷರ ಕ್ರೋಧಕ್ಕೆ ಸಾವನ್ನೂ ಅನುಗ್ರಹಿಸುತ್ತಾಳೆ. ಭಕ್ತಿಪಥಿಕನಾದ ರಕ್ತಬೀಜನ ವಿರೋಧಭಕ್ತಿ ಪ್ರಕಟವಾಗುವ ಬಗೆಯೇ ಬೇರೆ. ಅವನೊಳಗೆ ಶ್ರದ್ಧೆಯ ಭಾವ ಇದ್ದರೆ, ಹೊರಗೆ ವಿರೋಧ ಭಾವ ಪ್ರಕಟವಾಗುತ್ತಿರುತ್ತದೆ. ಇದೊಂದು ಬಗೆಯಲ್ಲಿ ಎದೆಯೊಳಗೆ ತೂಗುವ ಭಕ್ತಿ-ವಿರೋಧ ದ್ವಂದ್ವಗಳ ಉಯ್ಯಾಲೆಯಂತೆ. ರಕ್ತಬೀಜ, ಅಪ್ಪಟ ಭಕ್ತಿಪಂಥದ ಕಾಲಘಟ್ಟದಲ್ಲಿ, ಅಂದರೆ, 16 ನೆಯ ಶತಮಾನದಿಂದೀಚೆಗೆ ದೇವಿಯ ಕಥಾನಕÀವನ್ನು ಪ್ರವೇಶಿಸಿದ ಭಕ್ತಿಮಾರ್ಗದ ಪಾತ್ರ ಇದಾಗಿರಬಹುದು! ಆಮೇಲೆ ಯP್ಷÀಗಾನಕ್ಕೂ ಅದೇ ಪಾತ್ರಚಿತ್ರಣ ಬಂದಿರಬಹುದು. ಹೀಗೆ, ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ತೂಗಾಡುವ ದೇವಿಯೇ ಜಗದ ದ್ವಂದ್ವಗಳ ಪ್ರತೀಕ. ಅಂಥ ದ್ವಂದ್ವವಿಲ್ಲದ ಜಗತ್ತನ್ನು ರೂಪಿಸುವ ಕನಸನ್ನು ಹೊತ್ತವರು ಶುಂಭ-ನಿಶುಂಭರು. ಸುರಾಸುರ ಎಂಬ ಭಿನ್ನ ತಾತ್ತ್ವಿಕ ಸಂಘರ್ಷವಿದು. ಇದು ಈ ದೇವಿ ಮಹಾತ್ಮೆಯ ಪ್ರಯೋಗದ ಅಂತಃಸತ್ವ! ಜಗತ್ತಿನ ಸೃಷ್ಟಿಯ ಮೂಲ ‘ಪ್ರÀಕೃತಿ-ಪುರುಷ’ ತತ್ತ್ವದ ತಥ್ಯವನ್ನು ವೇದ್ಯವಾಗಿಸುವುದರ ಜೊತೆಗೆ ಮೌಲ್ಯಗಳ ಸಂಘರ್ಷಕ್ಕೂ ಇಲ್ಲಿ ಅನುವು ಮಾಡಿಕೊಡಲಾಗಿದೆ. ನಿರ್ದೇಶಕರಾದಿಯಾಗಿ ನಾವೆಲ್ಲ ಹೇಳಿಕೊಳ್ಳುವಂತೆ, ಮತ್ತು ಈ ಹಿಂದೆಯೂ ಹೇಳಿದಂತೆ, ‘ದೇವಿಮಹಾತ್ಮೆ’ಯ ಕಥಾವಿನ್ಯಾಸವು ಭಾವನಾತ್ಮಕವಾಗಿ ಮತ್ತು ಬೌದ್ಧಿಕವಾಗಿ ಮರು£ರೂಪಿಸುವ ಒಂದು ವಿನಮ್ರ ಪ್ರಯತ್ನ.

ಪೂರ್ಣ ರಾತ್ರಿಯ ಯಕ್ಷಗಾನವನ್ನು ಕಾಲಮಿತಿಗೆ ಅಳವಡಿಸುವುದೊಂದು ಸವಾಲು. ಈ ಪ್ರದರ್ಶನದ ಪೂರ್ವದಲ್ಲಿ ಸುಮಾರು ಒಂದು ಗಂಟೆ ಕಾಲ ಪೂರ್ವರಂಗವನ್ನು ಪ್ರಸ್ತುತಪಡಿಸಲಾಗಿತ್ತು. ಸೂತ್ರಧಾರ, ಬಾಲಗೋಪಾಲ, ಷಣ್ಮುಖ ಸುಬ್ರಾಯ, ಅರ್ಧನಾರೀಶ್ವರ, ಮುಖ್ಯಸ್ತ್ರೀವೇಷ ಮತ್ತು ಕಸೆಸ್ತ್ರೀವೇಷಗಳನ್ನು ಸಂಕಲನಕ್ಕೊಳಪಡಿಸಿ, ಹೃಸ್ವಗೊಳಿಸಿ ರಂಗದಮೇಲೆ ತರಲಾಗಿತ್ತು. ಅಷ್ಟದಿಕ್ಪಾಲಕರನ್ನು ಸಾಂಪ್ರದಾಯಿಕವಾಗಿ ಎಂಟು ಕಿರೀಟವೇಷಗಳಲ್ಲಿ ಕಾಣಿಸುವ ಪ್ರಯತ್ನ £ರ್ದೇಶಕರz್ದÉೀ ಕಲ್ಪನೆಯಾಗಿದೆ. ತೆರೆಕುಣಿತ, ಪ್ರಯಾಣದ ಕುಣಿತ, ಯುದ್ಧವೈವಿಧ್ಯಗಳಂಥ ಕ್ರಮಗಳನ್ನು ಈಗ ಲುಪ್ತವಾಗಿರುವ ಎಷ್ಟೋ ರಂಗನಡೆಗಳನ್ನು ಬಳಸಿಕೊಳ್ಳಲಾಗಿದೆ. ಯಕ್ಷಗಾನದ ಹಾಡುಗಾರಿಕೆಯನ್ನು ಸ್ವರಸಂಚಾರಗಳ ಸ್ಫುಟತೆಯೊಂದಿಗೆ  ಸಾಹಿತ್ಯಪ್ರಧಾನವಾಗಿ ಪ್ರಸ್ತುತಪಡಿಸಲಾಯಿತು. ಸಮಕಾಲೀನ ಸಂದರ್ಭಕ್ಕೆ ಒಪ್ಪುವಂತೆ ‘ಪರಿಷ್ಕøತ ಯP್ಷÀಗಾನ ರಂಗಸಂಗೀತ’ ಯನ್ನು ರೂಪಿಸುವ ಶೋಧ ಕವತ್ತಾರು ಅವರz್ದÁಗಿದೆ. ಇದಕ್ಕೆ ಪೂರಕವಾಗಿ ಯಾವುದಾದರೊಂದು ಸುಶಿರ ಅಥವಾ ಘನವಾದ್ಯಗಳನ್ನು ಬಳಸಬಹುದು, ಆ ಮೂಲಕ ಗಮಕಗಳನ್ನು ವಿಸ್ತರಿಸಬಹುದು ಎಂಬುದು ಅವರ ನಿಲುವಾಗಿದೆ. ಅದರಂತೆ ವಯಲಿನ್ ಅನ್ನು ಇಲ್ಲಿ ಬಳಸಲಾಗಿದೆ. ಇದು ಯP್ಷÀಗಾನಕ್ಕೇನೂ ಹೊಸತಲ್ಲ, ಈ ಹಿಂದೆ ಶಿವರಾಮ ಕಾರಂತರು ವಯಲಿನ್ ಅನ್ನು ಬಳಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಭಾಗವತ ವಿಶ್ವಾಸ್ ಅವರು ಆಲಾಪನೆ ರಹಿತವಾಗಿ ಸಾಹಿತ್ಯವನ್ನೇ ವಿವಿಧ ರಾಗಗಳಲ್ಲಿ ವಿರಳವಾಗಿ ಪ್ರಸ್ತುತಪಡಿಸಿ ಪೂರ್ವರಂಗವನ್ನು ಅಂದಗಾಣಿಸುತ್ತಿz್ದÁರೆ. ಯುವ ಸಂಗೀತಕಲಾವಿದ ನಾಗಶಯನ ಅವರು ಪ್ರದರ್ಶನದ ಒಟ್ಟಂದಕ್ಕೆ ಭಂಗಬಾರದಂತೆ ವಯಲಿನ್ ಸಾಥಿ ನೀಡಿದರು. ಸ್ಕಂದ ಕೊನ್ನಾರ್ ಮತ್ತು ಸಮರ್ಥ ಉಡುಪ ಅವರು ಭಾಗವತಿಕೆಗೆ ಪೂರಕವಾದ ವಾದನಸಾಥಿ ನೀಡುವಲ್ಲಿ ನುಡಿತಗಳನ್ನು ಮನೋಧರ್ಮಕ್ಕೆ ಅನುಗುಣವಾಗಿ ಅಳವಡಿಸುವ ಪ್ರಯತ್ನ ನಡೆಸಿz್ದÁರೆ. ಪ್ರಸಂಗದಲ್ಲಿ ತೆರೆಯನ್ನು ಒಂದು ಪಾತ್ರವಾಗಿಯೇ ನಾವು ಪರಿಕಲ್ಪಿಸಿಕೊಂಡಿದ್ದೇವೆ. ಆಧುನಿಕ ರಂಗಭೂಮಿಯ ಸಾಧ್ಯತೆಗಳಲ್ಲಿ ಬೆಳಕನ್ನು ‘ಥಿಯೇಟರ್ ಯಕ್ಷ’ ಕಲಾತ್ಮಕವಾಗಿ ಬಳಸುತ್ತಲೇ ಬಂದಿದೆ. ಆದಿಮಾಯೆಯ ಆವಿರ್ಭಾವ, ಬಂಗಾರಬಸಿರಿನ ಪ್ರವೇಶ, ಮಾಲಿನಿಯ ತೆರೆಪ್ರವೇಶ- ಇತ್ಯಾದಿಗಳಲ್ಲಿ ವಿಶಿಷ್ಟವಾಗಿ ಬೆಳಕಿನ ವಿನ್ಯಾಸ ಮಾಡಿದೆವು. ಬೆಳಕಿನ ವಿನ್ಯಾಸದಲ್ಲಿ ಸಹಕರಿಸಿದವರು ಪ್ರಸಿದ್ಧ ಕಲಾವಿದ ನಂದಕುಮಾರ್ ಕಲ್ಯಾಣಪುರ. ಶಂಕರನಾಣ್, ಬಿ.ವಿ. ಕಾರಂತರಂಥ ಮೇಧಾವಿಗಳೊಂದಿಗೆ ಒಡನಾಡಿದ ಕಲಾವಿದರು ಅವರು.

ನಮ್ಮ “ಥಿಯೇಟರ್ ಯಕ್ಷ” ತಂಡದಲ್ಲಿ ರಂಗತಾಲೀಮು ಇಲ್ಲದೆ ಪ್ರದರ್ಶನ ನೀಡುವ ಪದ್ಧತಿ ಇಲ್ಲ. ಹಿರಿಯ ಕಲಾವಿದರಾದ ಉಬರಡ್ಕ ಉಮೇಶ್ ಶೆಟ್ಟಿ, ಶಂಭಯ್ಯ ಕಂಜರ್ಪಣೆ, ಶಶಿಕಿರಣ್ ಕಾವು ಮೊದಲಾದ ಹಿರಿಯ ಕಲಾವಿದರೂ ಪೂರ್ವ ತಯಾರಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡದ್ದಿದೆ. ಇದೊಂದು ಸಮೂಹ ಪ್ರಯತ್ನ. ಸಮಷ್ಟಿಯಿಂದ ಒಂದು ಸುಂದರ ಕಲಾ ಕೃತಿಯನ್ನು ಪ್ರೇಕ್ಷಕರ ಮುಂದಿಟ್ಟು ಕಲೆಯ ಉದ್ದೀಪನ ಮಾಡುವುದು ಈ ಬಳಗಕ್ಕಿರುವ ಉದ್ದೇಶ. ಹಾಗಾಗಿ, ಇಲ್ಲಿ ವೇಳಧಾರಿಗಳೇ ಬಣ್ಣ ಪೆಟ್ಟಿಗೆಯನ್ನು ಬಿಡಿಸುತ್ತಾರೆ, ವೇಷ ಭೂಷಣದ ಕಟ್ಟನ್ನು ಹೊರುತ್ತಾರೆ, ರಂಗಸ್ಥಳ ಸಿದ್ಧ ಮಾಡುತ್ತಾರೆ, ಒಬ್ಬರಿಗೊಬ್ಬರು ವೇಷ ಭೂಷಣವನ್ನು ಕಟ್ಟುತ್ತಾರೆ, ನೇಪಥ್ಯ ಕಲಾವಿದರೊಂದಿಗೆ ಕೈಜೋಡಿಸುತ್ತಾರೆ, ಅಲ್ಲದೆ, ಇತರ ಎಲ್ಲಾ ಜವಾಬ್ದಾರಿಗಳನ್ನೂ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ, ಒಟ್ಟಿನಲ್ಲಿ ಇಲ್ಲಿ ಒಂದು ಪ್ರದರ್ಶನದ ಎಲ್ಲಾ ಆಯಾಮಗಳಲ್ಲಿ ಎಲ್ಲರೂ ಒಳಗೊಳ್ಳುವುದೇ ಮುಖ್ಯ ಎಂಬುದು ಈ ತಂಡದ ಧೋರಣೆ.

ವೇಷ ಭೂಷಣಗಳಲ್ಲಿ ಪಕಡಿವೇಷಗಳಿಗೆ ಅಲಂಕಾರಿಕ ನೆರಿಗೆಗಳಿರುವ ಭುಜದ ಬದಲು ಭುಜ ಕೀರ್ತಿಯನ್ನೇ ಬಳಸಿದ್ದೇವೆ. ಪ್ರಸಿದ್ಧ ಪ್ರಸಾಧನ ಕಲಾವಿದ ಅಡೂರು ಶ್ರೀಧರ ರಾಯರು ಹಿಂದೆ ದ್ರೋಣ£ಗೆ ಬಳಸಿದ ಕಿವಿ ರಹಿತ ಕೋಲು ಕಿರೀಟಗಳನ್ನು ರಾಜವೇಷಕ್ಕೆ ಸಂವಾದಿಯಾಗಿ ಸ್ತ್ರೀ ವೇಷಗಳಿಗೆ ಮತ್ತು ದ್ರೋಣ, ಕೃಷ್ಣ, ವಿಷ್ಣು, ರಾಮ-ಲಕ್ಷ್ಮಣ, ಮೊದಲಾದ ಪಾತ್ರಗಳಿಗೆ ಕವತ್ತಾರು ಅವರು ಬಳಸಿz್ದÁರೆ. ಇದರಲ್ಲಿಯೂ ಕಿರೀಟದ ಮೇಲಿನ ನವಿಲು ಗರಿಯನ್ನು ಇರಿಸಿಕೊಳ್ಳುವಾಗ, ತೆಗೆಯುವಾಗ, ಪಾಗು ಧರಿಸುವಾಗ ಅದಕ್ಕೊಂದು ಸೈದ್ಧಾಂತಿಕ ತಳಹದಿಯನ್ನಿರಿಸಿಕೊಳ್ಳಲಾಗಿದೆ. ಸ್ತ್ರೀವೇಷಗಳು ಉದ್ದ ಕೈ ರವಿಕೆ, ಕಸೆಯನ್ನು ಧರಿಸಿದ್ದಿದೆ. ಪಾರದರ್ಶಕವಾದ ಪರದೆಗಳನ್ನು, ಕಪ್ಪು,ಕೆಂಪು, ಹಳದಿ, ಹಸಿರು ಸಂಯುಕ್ತ ವರ್ಣದ ಪರದೆಗಳನ್ನು ಬಳಸುವುದಿದೆ. ಮರದ ಆಯುಧಗಳನ್ನೇ ಬಳಸುತ್ತೇವೆ. ಅಷ್ಟದಿಕ್ಪತಿಗಳನ್ನು, ಪಾಂಡವರನ್ನು ಹಸಿರು ಬಣ್ಣದ ಕಿರೀಟವೇಷದಲ್ಲಿಯೂ ಕೌರವರನ್ನು ಕೆಂಪು ಬಣ್ಣದ ಕಿರೀಟ ವೇಷದಲ್ಲಿಯೂ ಕಾಣಿಸಿದ್ದು, ಸಂಶಪ್ತಕರನ್ನು ಐದು ಮತ್ತು ರಾವಣನನ್ನು ಹತ್ತು ಬಣ್ಣದವೇಷಗಳಲ್ಲಿ ಚಿತ್ರಿಸಿದ್ದು ಇಲ್ಲಿ ಉ¯್ಲÉೀಖಾರ್ಹ ಅಂಶಗಳು. ಋಷಿಗಳ ಪಾತ್ರಗಳನ್ನು ಅವಧೂತರಂತೆ ರೂಪಿಸಿದ್ದು, ಋಷಿಗಳಿಗೆ ಪ್ರತ್ಯೇಕ ಒಡ್ಡೋಲಗ, ಪ್ರವೇಶ ಕುಣಿತಗಳನ್ನು ಅಳವಡಿಸಿದ ಸಂದರ್ಭಗಳೂ ಇವೆ. ಪ್ರಯಾಣ ಕುಣಿತಗಳನ್ನು, ರಥಯುದ್ಧದ ಕ್ರಮಗಳನ್ನು ರೂಢಿಸಿಕೊಳ್ಳಲಾಗಿದೆ. ಯಕ್ಷಗಾನದಲ್ಲಿ ಅಂತರ್ಗತವಾಗಿರುವ ಹೆಜ್ಜೆಗಳನ್ನು ಪಾತ್ರಚಿತ್ರಣಕ್ಕೆ ಪೂರಕವಾಗಿ ಹೊಂದಿಸಿಕೊಳ್ಳಲಾಗಿದೆ. 

ಆಧುನಿಕ ರಂಗಭೂಮಿಯ ಪರಿಭಾಷೆಯಲ್ಲಿ ಹೇಳುವುದಾದರೆ ಯಕ್ಷಗಾನ ಒಂದು “ಶೈಲೀಯ ನಾಟಕ”. ಇಲ್ಲಿ ರಂಗಭೂಮಿಯ ಪ್ರತೀ ಅಂಗಗಳಿಗೂ “ಯಕ್ಷಗಾನೀಯ” ಎಂಬ ಶೈಲಿಯ ಮಿತಿಯಿದೆ. ರಂಗ ಪರಿಕರಗಳು ಸಾಂಕೇತಿಕವಾಗಿವೆ. ಆ ಸಾಂಕೇತಿಕತೆ, ಶೈಲಿಯನ್ನು ಮೀರದೆ, ವಾಸ್ತವಕ್ಕಿಳಿಯದೆಯೇ ಕಲೆಯ ಅನನ್ಯತೆಯನ್ನು ಸಾಧಿಸುವ ಸವಾಲುಗಳನ್ನು ಸ್ವೀಕರಿಸಿಕೊಂಡೇ `ದೇವಿಮಹಾತ್ಮೆ’ ಪ್ರಯೋಗ ನಡೆದಿದೆ ಎಂಬುದು ಗಮನಾರ್ಹ. ಆಧುನಿಕ ಕಾಲ ಘಟ್ಟದ ಸಾಧ್ಯತೆಗಳನ್ನು ಬಳಸಿಕೊಳ್ಳುತ್ತಲೇ ಪ್ರಸಂಗಗಳನ್ನು ಮುರಿದು ಕಟ್ಟುವ ಮೂಲಕ ಹೊಸದನ್ನು ಶೋಧಿಸುತ್ತಲೇ ಬಂದಿದೆ.  ಈ ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ಪೃಥ್ವೀರಾಜ ಕವತ್ತಾರು ಅವರು ಮಂಗಳೂರಿನಲ್ಲಿ ನಿರ್ದೇಶಿಸಿದ `ದುಶ್ಯಾಸನ ವಧೆ’ ಪ್ರಸಂಗ ಉ¯್ಲÉೀಖಾರ್ಹ. ಅಲ್ಲಿನ ಕೆಲವು ನಡೆಗಳನ್ನು `ದೇವಿಮಹಾತ್ಮೆ’ಯಲ್ಲಿಯೂ ಬಳಸಲಾಗಿದೆ. ಯಕ್ಷಗಾನ ಕಲಾರಂಗವು ಪಂಚಶಿರ-ಪಂಚಶರ, ಮಹಾಪ್ರಸ್ಥಾನ, ಆತ್ಮಾನಾಂ ಮಾನುಷಂ ಮನ್ಯೆ, ಶ್ರೀಮನೋಹರಸ್ವಾಮಿ ಮೊದಲಾದ ಪ್ರಸಂಗಗಳನ್ನು ಆಯೋಜಿಸುತ್ತ ಬಂದಿದ್ದು ಈ ಪ್ರಸಂಗಗಳು ಪ್ರಸ್ತುತ ಯಕ್ಷಗಾನ ರಂಗದಲ್ಲಿ ಹೊಸ ಬೆಳವಣಿಗೆಗಳಿಗೆ ಪ್ರೇರಣೆಯಾಗಿರುವುದು ಗಮನಾರ್ಹ.

ಸಾಮಾನ್ಯವಾಗಿ ಯಕ್ಷಗಾನದಲ್ಲಿ “ಪರಂಪರೆ’ಗೆ ಆತುಕೊಂಡು ಇದ್ದಂತೆ ಮುಂದುವರಿಸುವುದು ವಾಡಿಕೆ. ವಾಚಿಕದಲ್ಲಾದರೂ ಅರ್ಥಧಾರಿಗಳ ಪ್ರತಿಭೆಯಿಂದ ಪ್ರಸಂಗಗಳು, ಪಾತ್ರಗಳು ಮರು ಕಥಿಸಲ್ಪಟ್ಟು ಹೊಸ ಹೊಳಹುಗಳನ್ನು ಪಡೆದಿವೆ. ಆದರೆ ಯಕ್ಷಗಾನದ ಇತರ ಅಂಗಗಳ ಮೇಲೆ ಇಂತಹ ಪ್ರಯೋಗಗಳಾಗಿಲ್ಲ. ನಾವು ಹಿಂದಿನವರನ್ನೇ ಅನುಕರಿಸುತ್ತಾ ಹೋದರೆ ಪರಂಪರೆಯನ್ನು ನಿಜವಾದ ಅರ್ಥದಲ್ಲಿ ಬೆಳೆಸಿದಂತಾಗುತ್ತದೆಯೇ? ಕಾಲಕ್ಕೆ ತಕ್ಕಂತೆ ಹಾಡುಗಾರಿಕೆಯ ಸ್ವರೂಪ, ಹಿಮ್ಮೇಳದ ನುಡಿತಗಳ ವಿಧಾನವನ್ನು ಮರುಹೊಂದಿಸುವುದರ ಜೊತೆಗೆ ವೇಷಭೂಷಣ, ಪ್ರಸಂಗಾಶಯ, ಪಾತ್ರಗಳ ತಾತ್ತ್ವಿಕತೆ, ಬೌದ್ಧಿಕವಾಗಿ ಮೌಲ್ಯಗಳ ಸಂಘರ್ಷ- ಇವೆಲ್ಲ ಕಲಾತ್ಮಕವಾಗಿ ಮರು ನಿರೂಪಣೆಯಾದಾಗಲೇ ಪರಂಪರೆಯನ್ನು ನಿಜವಾದ ಅರ್ಥದಲ್ಲಿ ಉಳಿಸಿದ ಹಾಗಾಗುತ್ತದೆ. ಕಲೆ ಮತ್ತು ಕಾಲದ ನಡುವೆ ಹತ್ತಿರದ ಸಂಬಂಧವಿರುತ್ತದೆ. ವರ್ತಮಾನವನ್ನು ಮರೆತು ಗತದಲ್ಲಿಯೇ ಹುದುಗಿ ಹೋದರೆ ಅದು ಪರಂಪರೆ ಎನಿಸುವುದಿಲ್ಲ. ಜಡವಾದ ಸಂಪ್ರದಾಯವಾಗುತ್ತದೆ. ಇಂದು ನಮ್ಮ ಸುತ್ತಲೂ ಜಡಸಂಪ್ರದಾಯದಲ್ಲೇ ಉಳಿದ ಕಲೆಗಳೂ ಇವೆ. ವರ್ತಮಾನಕ್ಕೆ ತಕ್ಕಂತೆ ಸ್ಪಂದಿಸಿ ಜಾಗತಿಕವಾಗಿ ವ್ಯಾಪಿಸಿದ ಕಲೆಗಳೂ ಇವೆ. ಆಯ್ಕೆ ನಮ್ಮ ಕೈಯಲ್ಲಿದೆಯಷ್ಟೇ.

ಸುನಿಲ್ ಪಲ್ಲಮಜಲು

ಪಲ್ಲಮಜಲು ಮನೆ, ಮೊಡಂಕಾಪು ಅಂಚೆ

ಬಂಟ್ವಾಳ ತಾಲ್ಲೂಕು, ದ.ಕ.-574 219

ದಕ್ಷಿಣ ಕನ್ನಡ, ಮೊ : 9900974996 

ಇಮೇಲ್ : sunilpallamajalu@gmail.com

  • Blogger Comments
  • Facebook Comments

0 comments:

Post a Comment

Item Reviewed: ಸೃಷ್ಟಿ-ಸ್ಥಿತಿ-ಲಯಗಳ ನಡುವಿನ ಉಯ್ಯಾಲೆಯಾಡುವ ಜಗದ ಸೋಜಿಗದ ಅನಾವರಣ : ಯಕ್ಷಗಾನ ಕಲಾರಂಗದ ವಿಭಿನ್ನ ಪ್ರಯೋಗ, ವಿನಮ್ರ ಪ್ರಯತ್ನ ಶ್ರೀದೇವಿ ಮಹಾತ್ಮೆ Rating: 5 Reviewed By: karavali Times
Scroll to Top