ಬಂಟ್ವಾಳ, ಸೆಪ್ಟೆಂಬರ್ 04, 2025 (ಕರಾವಳಿ ಟೈಮ್ಸ್) : ನಗರ ಪ್ರದೇಶದ ಬಡ ಜನರ ಆರೋಗ್ಯ ಸಂಜೀವಿನಿಯಾಗಿ “ನಮ್ಮ ಕ್ಲಿನಿಕ್” ಸೇವೆ ನೀಡಲಿದೆ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಹೇಳಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ಆರಂಭಗೊಂಡ “ನಮ್ಮ ಕ್ಲಿನಿಕ್” ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ 15ನೇ ಹಣಕಾಸಿನ ಪಿ ಎಂ ಎಚ್ ಐ ಎಂ ಯೋಜನೆಯಡಿ ಕ್ಲಿನಿಕ್ ಮಂಜೂರುಗೊಂಡಿದ್ದು, ನಗರ ಭಾಗದ ಜನರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಪುರಸಭಾ ಸದಸ್ಯರು ಅವರ ವಾರ್ಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಪ್ರಾಥಮಿಕ ಹಂತದಲ್ಲಿ ರೋಗದ ಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಕ್ಲಿನಿಕ್ ಮುಖಾಂತರ ಜನರಿಗೆ ಸಲಹೆ ನೀಡಬೇಕು ಎಂದು ಕೋರಿದರು.
40 ವರ್ಷದ ದಾಟಿದ ಪ್ರತಿಯೊಬ್ಬರೂ ಕೂಡ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಂಡರೆ ಉತ್ತಮ. ಆರೋಗ್ಯದ ರಕ್ಷಣೆಯ ಬಗ್ಗೆ ಉದಾಸೀನ ಮನೋಭಾವ ಬೇಡ. ವ್ಯಾಯಾಮ, ಯೋಗದ ಬಗ್ಗೆಯೂ ತಿಳಿಸಿದ ಶಾಸಕರು ಆರೋಗ್ಯ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿರಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ, ಸದಸ್ಯರಾದ ಪುರುಷೋತ್ತಮ, ಮೀನಾಕ್ಷಿ ಗೌಡ, ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಪುಷ್ಪಲತಾ, ಮಂಗಳೂರು ಆರ್ ಸಿ ಎಚ್ ಅಧಿಕಾರಿ ಡಾ ರಾಜೇಶ್, ಕೈಕಂಬ ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಅಶ್ವಿನಿ, ತಾಲೂಕು ಆಸ್ಪತ್ರೆಯ ಅಧಿಕಾರಿ ಡಾ ಅಶೋಕ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಆಯಿಶತ್, ಕ್ಲಿನಿಕ್ ಕಟ್ಟಡದ ಮಾಲಕ ಜನಾರ್ದನ ಭಾಗವಹಿಸಿದ್ದರು.
0 comments:
Post a Comment