ಬಂಟ್ವಾಳ, ಸೆಪ್ಟೆಂಬರ್ 13, 2025 (ಕರಾವಳಿ ಟೈಮ್ಸ್) : ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡಿ ಟಿಪ್ಪರಿನಲ್ಲಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ ಘಟನೆ ನಾವೂರು ಗ್ರಾಮದ ಮಲೆಕೋಡಿ ಎಂಭಲ್ಲಿ ಸೆ 12 ರಂದು ನಡೆದಿದೆ.
ಇಲ್ಲಿನ ನಿವಾಸಿ ಹರೀಶ್ ಪೂಜಾರಿ ಎಂಬವರು ಕೂಲಿಯಾಳುಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಮಂಜುನಾಥ ಟಿ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ದಾಳಿ ವೇಳೆ 2 ಜನ ವ್ಯಕ್ತಿಗಳು ಕೆಂಪು ಕಲ್ಲನ್ನು ಯಂತ್ರದ ಮೂಲಕ ಕಟ್ಟಿಂಗ್ ಮಾಡುತ್ತಿದ್ದು ಒಬ್ಬಾತ ಲಾರಿಯೊಂದಕ್ಕೆ ಕೆಂಪು ಕಲ್ಲನ್ನು ತುಂಬಿಸುತ್ತಿದ್ದ. ಪೊಲೀಸರನ್ನು ಕಂಡು ಮೂರು ಜನ ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳದಲ್ಲಿ ನೋಡಿದಾಗ ಕೆಂಪುಕಲ್ಲು ಅಳತೆ ಮಾಡಿ ತುಂಡು ಮಾಡಲು ಉಪಯೋಗಿಸುವ ಪವರ್ ಟಿಲ್ಲರ್, ಕೆಂಪು ಕಲ್ಲು ಅಳತೆ ಪಟ್ಟಿ, ಸಣ್ಣ ಸಣ್ಣ ರಾಡ್ ಗಳು ಹಾಗೂ ಕೆಂಪು ಕಲ್ಲು ಸಾಗಾಟಕ್ಕೆ ಕೆಂಪುಕಲ್ಲು ತುಂಬುತ್ತಿದ್ದ ಟಿಪ್ಪರ್ ಲಾರಿ ಕಂಡು ಬಂದಿದೆ. ಈ ಬಗ್ಗೆ ಗಣಿಗಾರಿಕೆ ನಡೆಸುತ್ತಿದ್ದ ಹರೀಶ್ ಪೂಜಾರಿ ಹಾಗೂ ಇತರರು ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲು ಗಣಿಗಾರಿಕೆ ಮಾಡಿ ಅಕ್ರಮವಾಗಿ ಲಾರಿಯಲ್ಲಿ ತುಂಬಿ ಕಳವು ಮಾಡಿಕೊಂಡು ಹೋಗಿ, ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದ ಹಿನ್ನಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment