ಪುತ್ತೂರು, ಅಕ್ಟೋಬರ್ 12, 2025 (ಕರಾವಳಿ ಟೈಮ್ಸ್) : ನಾನು ಬಡತನದಲ್ಲೇ ಮೇಲೆ ಬಂದಿದ್ದೇನೆ, ಬಡತನದ ಸಂಕಷ್ಟ ಅನುಭವಿಸಿದ್ದೇನೆ. ಇದಕ್ಕಾಗಿ ನಾನು ಸಂಪಾದಿಸಿದ ಹಣದಿಂದ ಒಂದಷ್ಟು ಬಡವರಿಗೆ ದಾನ ಮಾಡಲು ತೀರ್ಮಾನಿಸಿದ್ದು ಈ ಕಾರಣಕ್ಕೆ 13 ವರ್ಷದಿಂದ ದೀಪಾವಳಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದೇನೆ ಬಡವರ ಪ್ರೀತಿಯೊಂದೇ ಇದರ ಉದ್ದೇಶವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅ. 20 ರಂದು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜನಮನ ಕಾರ್ಯಕ್ರಮದ ಪ್ರಯುಕ್ತ ತೆಂಕಿಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಇದು ನನ್ನ ಕಾರ್ಯಕ್ರಮವಲ್ಲ ಕ್ಷೇತ್ರದ ಎಲ್ಲಾ ಮನೆಗಳ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆ ರಾಜ್ಯದ ಲೈಫ್ ಟೈಮ್ ಯೋಜನೆಯಾಗಲಿದ್ದು ಮುಂದಿನ ಬಾರಿಯೂ ಕಾಂಗ್ರೆಸ್ ಸರಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದ ಶಾಸಕರು ಇಷ್ಟು ವರ್ಷ ರಾಜ್ಯವನ್ನು ಆಳಿದ ಸರಕಾರಗಳು ಗ್ಯಾರಂಟಿ ಯೋಜನೆಯನ್ನು ಕೊಟ್ಟಿಲ್ಲ, ಎರಡೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಯನ್ನು ಜಾರಿ ಮಾಡಿ ಬಡವರಿಗೆ ನೆರವು ನೀಡುವ ಕಾರ್ಯ ನಡೆಯುತ್ತಿದೆ ಎಂದರು.
ಸಿ ಎಂ ಸಿದ್ದರಾಮಯ್ಯ ಅವರಿಗೆ ದಲಿತರ ಮೇಲೆ ಅತ್ಯಂತ ಪ್ರೀತಿ ಇದೆ. ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರಕಾರ ನೂರಾರು ಯೋಜನೆಗಳನ್ನು ನೀಡಿದ್ದಾರೆ. ಇಷ್ಟೊಂದು ಯೋಜನೆಗಳನ್ನು ನೀಡಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸನ್ನು ಎಂದಿಗೂ ನಾವು ಮರೆಯಬಾರದು ಎಂದು ಶಾಸಕ ಅಶೋಕ್ ರೈ ಹೇಳಿದರು.
ಈ ಸಂದರ್ಭ ಟ್ರಸ್ಟ್ ಪ್ರಮುಖರಾದ ನಿರಂಜನ್ ರೈ, ಕೃಷ್ಣಪ್ರಸಾದ್ ಆಳ್ವ, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸುಂದರ ಕೇಪು, ಬಶೀರ್ ಪರ್ಲಡ್ಕ, ಮೋನು ಬಪ್ಪಳಿಗೆ, ಮಹಾಬಲ ರೈ ವಳತ್ತಡ್ಕ, ತೆಂಕಿಕ ಆದಿಮೊಗೆರ್ಕಳ ಸೇವಾ ಸಮಿತಿ ಅಧ್ಯಕ್ಷ ಲೋಹಿತಾಕ್ಷ, ರಫೀಕ್ ಮೊಟ್ಟೆತ್ತಡ್ಕ, ಅಲೀ ಪರ್ಲಡ್ಕ, ಮುಕೇಶ್ ಕೆಮ್ಮಿಂಜೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment