ಮಂಗಳೂರು, ಅಕ್ಟೋಬರ್ 31, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರದಲ್ಲಿ ಸುಗಮ ಸಂಚಾರ ಅನುವು ಮಾಡಿಕೊಡಲು ಹಾಗೂ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆಗೊಳಿಸಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಇದರ ಬಗ್ಗೆ ಕಳೆದ ಮೂರು ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ನೋ ಪಾರ್ಕಿಂಗ್, ಅನಧಿಕೃತ ಪಾರ್ಕಿಂಗ್, ಡಬ್ಬಲ್ ಪಾರ್ಕಿಂಗ್, ಫೂಟ್ ಪಾತ್ ಪಾರ್ಕಿಂಗ್ ಮಾಡಿದ ವಾಹನ ಮಾಲಕ/ ಚಾಲಕರ ವಿರುದ್ಧ 4793 ಪ್ರಕರಣಗಳನ್ನು ದಾಖಲಿಸಿ 23,21,200/- ರೂಪಾಯಿ ದಂಡ ವಿಧಿಸಲಾಗಿದೆ. ಮುಂದುವರೆದು ಕೆಲವು ವಾಣಿಜ್ಯ ಸಂಕೀರ್ಣ ಮತ್ತು ದೊಡ್ಡ ವ್ಯಾಪಾರ ಮಳಿಗೆಗಳಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ, ಅವರುಗಳಿಗೆ ಸಭೆ ಮೂಲಕ ತಿಳುವಳಿಕೆ ನೀಡಿದ್ದಲ್ಲದೇ, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿ ನೋಟಿಸು ನೀಡಲಾಗಿದೆ.
ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಬ್ಲ್ಯಾಕ್ ಸ್ಪಾಟುಗಳ (ಹೆಚ್ಚು ಅಪಘಾತಗಳಾಗುವ) ಬಳಿ ಅತೀ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಂಡು 562 ಪ್ರಕರಣಗಳನ್ನು ದಾಖಲಿಸಿ 5.62 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಅದೇ ರೀತಿ ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಉಪಯೋಗಿಸಿರುವ ವಾಹನಗಳ ವಿರುದ್ದ 5,865 ಪ್ರಕರಣಗಳನ್ನು ದಾಖಲಿಸಿ 24,85,900/- ರೂಪಾಯಿ ದಂಡ ವಿಧಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸದ್ರಿ ವಾಹನಗಳ ಟಿಂಟೆಡ್ ಸ್ಟಿಕರ್ಸ್/ ಬ್ಲ್ಯಾಕ್ ಫಿಲ್ಮ್ ತೆಗೆಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.















0 comments:
Post a Comment