ದಕ್ಷಿಣ ಕನ್ನಡದಲ್ಲಿ ಶೇ 63.41 ಮನೆಗಳ ಸಮೀಕ್ಷೆ ಪೂರ್ಣ : ಶಿಕ್ಷಣ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ - Karavali Times ದಕ್ಷಿಣ ಕನ್ನಡದಲ್ಲಿ ಶೇ 63.41 ಮನೆಗಳ ಸಮೀಕ್ಷೆ ಪೂರ್ಣ : ಶಿಕ್ಷಣ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ - Karavali Times

728x90

6 October 2025

ದಕ್ಷಿಣ ಕನ್ನಡದಲ್ಲಿ ಶೇ 63.41 ಮನೆಗಳ ಸಮೀಕ್ಷೆ ಪೂರ್ಣ : ಶಿಕ್ಷಣ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ

ಮಂಗಳೂರು, ಅಕ್ಟೋಬರ್ 06, 2025 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 63.41 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಮಾಹಿತಿ ನೀಡಿದ್ದಾರೆ.

ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,86,134 ಮನೆಗಳ ಸಮೀಕ್ಷೆ ನಿಗದಿಪಡಿಸಲಾಗಿದೆ. ಈ ಪೈಕಿ 3,71,694  ಮನೆಗಳ ಸಮೀಕ್ಷೆ ಸೋಮವಾರ ಅಪರಾಹ್ನದವರೆಗೆ ಪೂರ್ಣಗೊಂಡಿರುತ್ತದೆ. ಸಮೀಕ್ಷೆಗೆ ಅಕ್ಟೋಬರ್ 7 ರವರೆಗೆ ಸಮಯಾವಕಾಶವಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸವಿದೆ ಎಂದವರು ಹೇಳಿದರು.

ಸುಳ್ಯ ತಾಲೂಕಿನಲ್ಲಿ ಶೇಕಡಾ 100ರಷ್ಟು ಸಮೀಕ್ಷೆ ಕಾರ್ಯ ಮುಗಿದಿದೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ  1,09,151  ಮನೆಗಳ ಸಮೀಕ್ಷೆ ಮುಗಿದಿದೆ ಎಂದು ಡಿಸಿ ಸಚಿವರಿಗೆ ಮಾಹಿತಿ ನೀಡಿದ್ದಾರೆ. 

ಶಾಲಾ ಶಿಕ್ಷಣ ಸಚಿವ  ಎಸ್. ಮಧು ಬಂಗಾರಪ್ಪ ಮಾತನಾಡಿ, ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ಬಹಳಷ್ಟು ಸಹಕರಿಸಿದ್ದಾರೆ. ದಸರಾ ಸಮಯದಲ್ಲಿಯೂ ಕಾರ್ಯನಿರ್ವಹಿಸುವ ಮೂಲಕ  ಶ್ಲಾಘನೀಯ ಸೇವೆ ಮಾಡಿದ್ದಾರೆ. ಈ ಸಮೀಕ್ಷೆಯು ಸರ್ವರನ್ನೂ ಒಳಗೊಂಡಿರಬೇಕು ಎಂಬುದು ಮುಖ್ಯಮಂತ್ರಿಗಳ ಆಶಯ ಎಂದರು.

ಸಮೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆಯು ಅತ್ಯಧಿಕ ಮಾನವ ಸಂಪನ್ಮೂಲವನ್ನು ಒದಗಿಸಿದೆ. ಸಮೀಕ್ಷೆ ನಡೆಸುವಾಗ ಕ್ಷೇತ್ರ ಮಟ್ಟದಲ್ಲಿ ಹಲವು ಸಮಸ್ಯೆಗಳಿದ್ದರೂ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಕೆಲವೊಂದು ಸಮಸ್ಯೆಗಳ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ  ಗಮನಕ್ಕೆ ತಂದು ಮಾರ್ಗದರ್ಶನ ಪಡೆದು ಪರಿಹರಿಸುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ್ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡದಲ್ಲಿ ಶೇ 63.41 ಮನೆಗಳ ಸಮೀಕ್ಷೆ ಪೂರ್ಣ : ಶಿಕ್ಷಣ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ Rating: 5 Reviewed By: karavali Times
Scroll to Top