ಬಂಟ್ವಾಳ, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಹೃದಯ ಭಾಗದಲ್ಲಿರುವ ಇಂದಿರಾ ಕ್ಯಾಂಟೀನಿನ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಅಡುಗೆ ಸಾಮಾನುಗಳನ್ನು ಶೇಖರಿಸಿಡುವ ರೆಫ್ರಿಜರೇಟರ್ ಕಾರ್ಯನಿರ್ವಹಿಸದೆ ಹಲವು ತಿಂಗಳುಗಳೇ ಕಳೆದಿರುವ ಬಗ್ಗೆ ಪತ್ರಿಕಾ ವರದಿಗೆ ಸ್ಪಂದಿಸಿದ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ ಬಿ ಅವರು ಬುಧವಾರ ಕ್ಯಾಂಟೀನಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದಿರಾ ಕ್ಯಾಂಟೀನಿನ ಒಳಗೆ, ಅಡುಗೆ ಕೋಣೆ ಸಹಿತ ಹೊರ ಆವರಣದ ಸುತ್ತಲೂ ಪರಿಶೀಲನೆ ನಡೆಸಿದ ಅವರು ಇಲ್ಲಿನ ಅವ್ಯವಸ್ಥೆಗಳ ಬಗ್ಗೆಯೂ ವಿಶೇಷ ಗಮನ ಹರಿಸಿ ಸುವ್ಯವಸ್ಥಿತಗೊಳಿಸಿ ಸುಂದರೀಕರಣಗೊಳಿಸಲೂ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಇಲ್ಲಿನ ಸಿಬ್ಬಂದಿಗಳಿಗೆ ವೇತನ ಸಿಗದೆ 3 ತಿಂಗಳು ಕಳೆದಿದೆ ಎಂದು ಸಿಬ್ಬಂದಿ ರಝಾಕ್ ಅವರು ಮುಖ್ಯಾಧಿಕಾರಿ ಅವರ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರ ವ್ಯವಸ್ಥೆ ಮಾಡುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.
ಇಲ್ಲಿನ ಶುದ್ದ ಕುಡಿಯುವ ನೀರಿನ ಘಟಕದ ಬಿಸಿಯಾಗುವ ಹಾಗೂ ತಂಪಾಗುವ ವ್ಯವಸ್ಥೆಯು ಕೈಕೊಟ್ಟಿದೆಯಲ್ಲದೆ ನೀರನ್ನು ಇಲ್ಲಿನ ಸಿಬ್ಬಂದಿಗಳು ನಿತ್ಯ ಕೈಯಲ್ಲೇ ತುಂಬಿಸುವ ಸ್ಥಿತಿ ಉಂಟಾಗಿತ್ತು. ಅಲ್ಲದೆ ಇಲ್ಲಿನ ಅಡುಗೆ ಕೋಣೆಯಲ್ಲಿನ ಫ್ರಿಡ್ಜ್ ವ್ಯವಸ್ಥೆ ಕೈಕೊಟ್ಟು ಹಲವು ಸಮಯಗಳೇ ಕಳೆದಿತ್ತು. ಯಾವುದೇ ಆಹಾರ ಪರಾರ್ಥಗಳನ್ನಾಗಲೀ, ಸೊಪ್ಪು ತರಕಾರಿಗಳು ಮೊದಲಾದ ಅಡುಗೆ ಉಪಯುಕ್ತ ಸಾಮಾಗ್ರಿಗಳನ್ನಾಗಲೀ ಕೆಡದಂತೆ ಸುರಕ್ಷಿತವಾಡುವುದು ಸಾಧ್ಯವಾಗುತ್ತಿಲ್ಲ. ಫ್ರಿಡ್ಜ್ ಕೈ ಕೊಟ್ಟಿರುವ ಪರಿಣಾಮ ಇಲ್ಲಿನ ಆಹಾರ ಪದಾರ್ಥಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಪ್ರತಿದಿನಕ್ಕೆ ಬೇಕಾಗುವಷ್ಟೆ ತೂಗಿ ಅಳೆದು ತರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ತಂದ ಸಾಮಾನುಗಳು ಒಂದಷ್ಟು ಹೆಚ್ಚಾದರೂ ಅದನ್ನು ಸಂರಕ್ಷಿಸಿಡಲು ಸಾಧ್ಯವಾಗದೆ ಅದು ಹಾಳಾಗುವ ಸ್ಥಿತಿ ಇದೆ. ಇದು ನಷ್ಟಕ್ಕೂ ಕಾರಣವಾಗುತ್ತಿದೆ ಎಂಬ ಬಗ್ಗೆ ಕರಾವಳಿ ಟೈಮ್ಸ್ ಇತ್ತೀಚೆಗೆ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರನ್ನು ಎಚ್ಚರಿಸಿತ್ತು.
ಪತ್ರಿಕಾ ವರದಿ ಗಮನಿಸಿದ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಬುಧವಾರ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಈ ಸಂದರ್ಭ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಮ್ಯಾನೇಜರ್ ಉಮಾವತಿ ಜೊತೆಗಿದ್ದರು.






















0 comments:
Post a Comment