ಬಂಟ್ವಾಳ, ನವೆಂಬರ್ 14, 2025 (ಕರಾವಳಿ ಟೈಮ್ಸ್) : 2025-26ನೇ ಸಾಲಿನ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ಶಾಸಕರ ಕಛೇರಿಯಲ್ಲಿ ನ 13 ರಂದು ನಡೆಯಿತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಪ್ರಕಾರ ರಚನೆಗೊಂಡ ಬಂಟ್ವಾಳ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ 2026-27ನೇ ಸಾಲಿನ ತಾಲೂಕು ಅಭಿವೃದ್ಧಿ ಯೋಜನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವ ಕುರಿತು ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
2026-27ನೇ ಸಾಲಿನ ತಾಲೂಕು ಅಭಿವೃದ್ಧಿ ಯೋಜನಾ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮೂಲಕ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗಕ್ಕೆ ಸಲ್ಲಿಸಬೇಕಾಗಿರುವುದರಿಂದ ಬಂಟ್ವಾಳ ತಾಲೂಕಿನ 51 ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸ್ವಯಂ ಆಡಳಿತಗಳು ಹಾಗೂ ಇಲಾಖೆಗಳು ಸಲ್ಲಿಸಿದ 35072.42 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಕರಡು ವಾರ್ಷಿಕ ಯೋಜನೆಯನ್ನು ಪರಿಶೀಲಿಸಿ ಅನುಮೋದಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು, ಸರಕಾರದ ಅನುದಾನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಸಹಕಾರ ನೀಡಿ. ಮಂಜೂರುಗೊಂಡ ಅನುದಾನಗಳ ಉಳಿಕೆಯಾಗದಂತೆ ಅಧಿಕಾರಿಗಳು ಗಮನಹರಿಸಿ. ಅನುದಾನ ನೀಡುವ ವೇಳೆ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಹಂಚಿಕೆಯಾಗುವಂತೆಯೂ ನೋಡಿಕೊಳ್ಳಲು ಸೂಚಿಸಿದರು.
ಬಂಟ್ವಾಳ ಯೋಜನಾ ಸಮಿತಿ ಉಪಾಧ್ಯಕ್ಷೆ ಕನ್ಯಾನ ಗ್ರಾ ಪಂ ಅಧ್ಯಕ್ಷೆ ರೇಖಾ ರಮೇಶ್, ಸಮಿತಿ ಸದಸ್ಯರುಗಳಾದ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಅಮ್ಮುಂಜೆ ಗ್ರಾ ಪಂ ಅಧ್ಯಕ್ಷೆ ಲಕ್ಮೀ, ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಕಡೇಶಿವಾಲಯ ಗ್ರಾ ಪಂ ಅಧ್ಯಕ್ಷ ಭಾರತೀ ಎಸ್ ರಾವ್, ಪಿಲಾತಬೆಟ್ಟು ಗ್ರಾ ಪಂ ಅಧ್ಯಕ್ಷೆ ಶಾರದಾ, ಉಳಿ ಗ್ರಾ ಪಂ ಅಧ್ಯಕ್ಷೆ ರೇವತಿ, ಸದಸ್ಯ ಕಾರ್ಯದರ್ಶಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ ಪ್ರಕಾಶ್ಚಂದ್ರ ಬಿ, ಬಂಟ್ವಾಳ ಎಪಿಎಂಸಿ ಕಾರ್ಯದರ್ಶಿ ಶಮಂತ್ ಕುಮಾರ್, ಎಲ್ ಡಿ ಬ್ಯಾಂಕ್ ಮ್ಯಾನೇಜರ್ ಕುಮಾರ್ ಮುಟಗಾರ್, ಉಪ ತಹಶೀಲ್ದಾರ್ ಶಿವಪ್ರಸಾದ್ ಸಭೆಯಲ್ಲಿ ಭಾಗವಹಿಸಿದ್ದರು.

















0 comments:
Post a Comment