ಬಂಟ್ವಾಳ, ನವೆಂಬರ್ 13, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಹೃದಯ ಭಾಗವಾಗಿರುವ ಬಿ ಸಿ ರೋಡು ಹಾಗೂ ಬಂಟ್ವಾಳದಲ್ಲಿ ಎರಡು ಪಾರ್ಕುಗಳನ್ನು ಮಾಜಿ ಸಚಿವರ ಮಹತ್ವಾಕಾಂಕ್ಷೆಯಿಂದ ನಿರ್ಮಿಸಲಾಗಿದೆ. ಬಿ ಸಿ ರೋಡಿನ ಟ್ರಿ ಪಾರ್ಕ್ ಹಾಗೂ ಬಂಟ್ವಾಳದ ಸಾಲು ಮರ ತಿಮ್ಮಕ್ಕ ಪಾರ್ಕುಗಳು ಉದ್ಘಾಟನೆಗೊಂಡು ಜನರಿಗೆ ಅರ್ಪಣೆಗೊಂಡು ಹಲವು ವರ್ಷಗಳು ಕಳೆದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಜನರ ಉಪಯೋಗಕ್ಕೆ ಬಂದಿಲ್ಲ.
ಇಲ್ಲಿನ ಎರಡೂ ಪಾರ್ಕುಗಳ ಪ್ರವೇಶಕ್ಕೆ ಶುಲ್ಕ ವಿಧಿಸಿರುವುದರಿಂದ ಹಾಗೂ ಪಾರ್ಕಿನ ಒಳಗೆ ಸಮರ್ಪಕ ನಿರ್ವಹಣೆ ಇಲ್ಲದೆ ಜನರ ಪ್ರವೇಶ ಇಲ್ಲದೆ ಸೊರಗಿ ಹೋಗುತ್ತಿದೆ. ಜನರ ಮಾನಸಿಕ ನೆಮ್ಮದಿಗಾಗಿ ಮಾಜಿ ಸಚಿವ ರಮಾನಾಥ ರೈ ಅವರು ಉತ್ತಮ ಚಿಂತನೆಯಿಂದ ಪಟ್ಟಣಗಳ ಮಧ್ಯ ಭಾಗದಲ್ಲಿ ಈ ಪಾರ್ಕುಗಳನ್ನು ನಿರ್ಮಿಸಿ ಅರ್ಪಿಸಿದ್ದಾರಾದರೂ ಅವರ ಉದ್ದೇಶ ಮಾತ್ರ ಇನ್ನೂ ಈಡೇರಿಲ್ಲ. ಎರಡೂ ಪಾರ್ಕುಗಳ ಪ್ರವೇಶಕ್ಕೆ ಸ್ಥಳೀಯ ಪುರಸಭಾಡಳಿತ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಶುಲ್ಕ ವಿಧಿಸಿರುವುದರಿಂದ ಜನ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಪಾರ್ಕುಗಳ ಒಳ ಭಾಗದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಕಳೆ ಗಿಡಗಳು ಮೊದಲಾದ ಜಂತುಗಳು ಬೆಳೆದು ಒಳ ಪ್ರವೇಶಿಸುವುದೇ ಒಂದು ರೀತಿಯಲ್ಲಿ ಮುಜುಗರವಾಗುತ್ತಿದೆಯಲ್ಲದೆ ಬಂಟ್ವಾಳದ ಸಾಲುಮರ ತಿಮ್ಮಕ್ಕ ಪಾರ್ಕ್ ನದಿ ಬದಿಯಲ್ಲಿರುವುದರಿಂದ ಪರಿಸರದಲ್ಲಿ ಹಾವು, ವಿಷ ಜಂತುಗಳಂತಹ ಸರೀಸೃಪಗಳ ಸಂಚಾರವೂ ಇರುವುದರಿಂದ ಜನರ ಪಾಲಿಗೆ ಅಪಾಯವೂ ಇದೆ. ಈ ಬಗ್ಗೆ ಭಯಪಟ್ಟು ಕೂಡಾ ಜನ ಈ ಪಾರ್ಕುಗಳಿಗೆ ಕನಿಷ್ಠ ಮಕ್ಕಳನ್ನು ಕರೆತರಲೂ ಹಿಂದೆ ಸರಿಯುತ್ತಿದ್ದಾರೆ.
ಅಲ್ಲದೆ ಪ್ರವೇಶ ಶುಲ್ಕ, ಫೋಟೋ ಶೂಟ್ ಶುಲ್ಕ ಮೊದಲಾದ ಶುಲ್ಕಗಳಿರುವುದರಿಂದ ಶುಲ್ಕ ನೀಡಿ ಪ್ರವೇಶಿಸುವಂತಹ ವಿಶೇಷತೆಗಳು ಈ ಪಾರ್ಕುಗಳ ಒಳಗೆ ಏನೂ ಇಲ್ಲದೆ ಇರುವುದರಿಂದಲೂ ಜನ ನಿರಾಸಕ್ತಿ ತೋರುತ್ತಿದ್ದಾರೆ. ಅಲ್ಲದೆ ಸಮೀಪದಲ್ಲೇ ಲಯನ್ಸ್ ಸೇವಾ ಸಂಸ್ಥೆಯ ಅಧೀನದಲ್ಲಿ ನಿರ್ಮಾಣಗೊಂಡಿರುವ ಪಾರ್ಕಿನಲ್ಲಿ ಯಾವುದೇ ಶುಲ್ಕ ಇಲ್ಲದೆ ಇದ್ದು, ಮಕ್ಕಳ ಸಹಿತ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅಲ್ಲದೆ ಪಾರ್ಕಿನ ಒಳಗೆ ಮಕ್ಕಳ ಆಟಿಕೆ ಸಾಮಾಗ್ರಿಗಳೂ ಸಾಕಷ್ಟಿರುವುದರಿಂದ ಇಲ್ಲಿಗೆ ಆಗಮಿಸುವ ಜನರ ಸಂಖ್ಯೆ ನಿತ್ಯವೂ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತಿದೆ.
ಮಂಗಳೂರಿನಂತಹ ಮಹಾನಗರ ಹಾಗೂ ಪುತ್ತೂರಿನಂತಹ ಪಟ್ಟಣಗಳಲ್ಲೂ ಸಾಕಷ್ಟು ಪಾರ್ಕುಗಳು ಜನರ ಮನಸ್ಸಿನ ನೆಮ್ಮದಿಗಾಗಿ ಉಚಿತ ಪ್ರವೇಶಗಳಿಂದ ಕೂಡಿರುವುದರಿಂದ ಬಂಟ್ವಾಳದಲ್ಲಿ ಅಂತಹ ಯಾವುದೇ ವ್ಯವಸ್ಥೆಗಳೂ ಇರುವುದಿಲ್ಲ. ಬಂಟ್ವಾಳದಲ್ಲಿ ಕನಿಷ್ಠ ಜನ ವ್ಯಾಯಾಮಕ್ಕಾಗಿಯಾದರೂ ನಡೆದಾಡುವ ಉದ್ದೇಶದ ವಾಕಿಂಗ್ ಪಾಥ್ ಗಳೂ ಇಲ್ಲದೆ ಇರುವುದರಿಂದ ಜನರ ನೆಮ್ಮದಿಗಾಗಿ ಯಾವುದೇ ವ್ಯವಸ್ಥೆ ಇಲ್ಲದಂತಹ ಸ್ಥಿತಿ ಇದೆ. ಈ ಕಾರಣಕ್ಕಾಗಿ ಬಂಟ್ವಾಳದಲ್ಲಿ ಇರುವ ಎರಡು ಪಾರ್ಕುಗಳನ್ನಾದರೂ ಜನರಿಗೆ ಶುಲ್ಕ ರಹಿತವಾಗಿ ಒದಗಿಸುವುದರಿಂದ ಉದ್ದೇಶ ಸಾಧನೆ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯ ನಗರ ವಾಸಿಗಳಿಂದ ಕೇಳಿ ಬರುತ್ತಿದೆ.


















0 comments:
Post a Comment