ಮಂಗಳೂರು, ನವೆಂಬರ್ 21, 2025 (ಕರಾವಳಿ ಟೈಮ್ಸ್) : ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಅನುಷ್ಠಾನದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಿತಿ ಸಭೆಯು ಶುಕ್ರವಾರ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾನಗರಪಾಲಿಕೆ, ನಗರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಬೀದಿ ನಾಯಿಗಳ ಗಣತಿಯನ್ನು ಮಾಡಿ ವರದಿ ಸಲ್ಲಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ಹಾಗೂ ಪ್ರವಾಸಿ ತಾಣಗಳ ಆವರಣದಲ್ಲಿ ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಿ ಈಗಾಗಲೆ ಗೊತ್ತುಪಡಿಸಿದ ನಾಯಿ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸುವುದು ಹಾಗೂ ಮುಂದಿನ ದಿನಗಳಲ್ಲಿ ಸದರಿ ಸಂಸ್ಥೆಗಳ ಆವರಣದಲ್ಲಿ ಬೀದಿ ನಾಯಿಗಳು ನುಸುಳದಂತೆ ಕ್ರಮಕೈಗೊಂಡು ಈ ಬಗ್ಗೆ ಓರ್ವ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಕ ಮಾಡಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರತೀ 3 ತಿಂಗಳಿಗೊಮ್ಮೆ ಈ ಎಲ್ಲಾ ಸಂಸ್ಥೆಗಳ ಆವರಣದ ಒಳಗೆ ಮತ್ತು ಹೊರಗೆ ಬೀದಿ ನಾಯಿಗಳ ವಾಸಸ್ಥಾನ ಇಲ್ಲದಿರುವ ಬಗ್ಗೆ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು. ಸಾರ್ವಜನಿಕ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪಾರ್ಕ್, ಡಿಪೋ ಮತ್ತು ಟರ್ಮಿನಲ್ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ಸಿಗದಂತೆ ನೋಡಲ್ ಅಧಿಕಾರಿಗಳು ಕ್ರಮ ವಹಿಸಬೇಕು. ಎಲ್ಲಾ ತಾಲೂಕಿನ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಬೀದಿ ನಾಯಿ ಆಶ್ರಯ ಕೇಂದ್ರವನ್ನು ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ನಡತೆ, ಪ್ರಾಣಿಗಳ ಕಡಿತಕ್ಕೆ ಪ್ರಥಮ ಚಿಕಿತ್ಸೆ ಮತ್ತು ತಕ್ಷಣ ವರದಿ ಮಾಡುವ ಶಿಷ್ಟಾಚಾರದ ಬಗ್ಗೆ ಜಾಗೃತಿ ಶಿಬಿರಗಳನ್ನು ಆಯೋಜಿಸಲು ಡೀಸಿ ಸೂಚಿಸಿದರು.
ಹೆದ್ದಾರಿಗಳಲ್ಲಿ ಎಲ್ಲಾ ದನ ಮತ್ತು ಬೀಡಾಡಿ ಪ್ರಾಣಿಗಳನ್ನು ಆಶ್ರಯ ತಾಣ/ ಗೋಶಾಲೆಗೆ ಸ್ಥಳಾಂತರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ ಮತ್ತು ನಗರ ಮತ್ತು ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರಿಗೆ, ಹೆದ್ದಾರಿ ಮತ್ತು ಪೆÇಲೀಸ್ ಇಲಾಖೆಯಿಂದ ಹೆದ್ದಾರಿ ಗಸ್ತು ತಂಡ ರಚಿಸಿ ಸಹಾಯವಾಣಿ ಸಂಖ್ಯೆಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸುವುದು, ಈ ಸಂಖ್ಯೆಗಳನ್ನು ಕಂಟ್ರೋಲ್ ರೂಂ, ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಪೆÇಲೀಸ್ ಇಲಾಖೆಗೆ ಲಿಂಕ್ ಮಾಡಲು ಸೂಚಿಸಿದರು. ಮಹಾನಗರಪಾಲಿಕೆ ಮತ್ತು ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರಗಳನ್ನು ಹಾಕುವ ಸ್ಥಳ ಮತ್ತು ಸಮಯವನ್ನು ಕೂಡಲೇ ನಿಗದಿಪಡಿಸುವಂತೆ ನಿರ್ದೇಶನ ನೀಡಿದರು. ಇದರ ಬಗ್ಗೆ ಸಾಕಷ್ಟು ಭಿತ್ತಿ ಪತ್ರಗಳನ್ನು ಸದರಿ ಸ್ಥಳದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇದನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ತಿಳಿಸಿದರು.
ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಪ್ರಾರಂಭಿಕ ಹಂತದಲ್ಲಿ ಕನಿಷ್ಟ 100 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅವರು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಸುಪ್ರೀಂ ಕೋರ್ಟ್‍ಗೆ ಡಿಸೆಂಬರ್ 20ರೊಳಗೆ ಅಫಿಡವಿಟ್ ಸಲ್ಲಿಸಬೇಕಾಗಿರುವುದರಿಂದ ಈ ಎಲ್ಲಾ ಸೂಚನೆಗಳಿಗೆ ಕ್ರಮ ಕೈಗೊಂಡು ಪ್ರತಿಯೊಂದು ಇಲಾಖೆಯು ಪಾಲನಾ ವರದಿಯನ್ನು ನೋಡಲ್ ಇಲಾಖೆಯಾದ ನಗರಾಭಿವೃದ್ಧಿ ಇಲಾಖೆಗೆ (ಪೌರಾಡಳಿತ) ಡಿ. 15ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಮಿತಿ ಸದಸ್ಯ ಕಾರ್ಯದರ್ಶಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಎನ್ ಮಾತನಾಡಿ, ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ 7ರಂದು ಸರ್ವೋಚ್ಚ ನ್ಯಾಯಾಲಯವು ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ., ಮಂಗಳೂರು ಉಪವಿಭಾಗಾಧಿಕಾರಿ ಕುಮಾರಿ ಮೀನಾಕ್ಷಿ ಆರ್ಯ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.















0 comments:
Post a Comment