ಪುತ್ತೂರು, ನವೆಂಬರ್ 25, 2025 (ಕರಾವಳಿ ಟೈಮ್ಸ್) : ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ಆವರಣದಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಅದನ್ನು ಪರಿಶೀಲಿಸಿ ಕೂಡಲೇ ಅದರ ಸಂಖ್ಯೆಯನ್ನು ಲೆಕ್ಕ ಮಾಡಿ ಪುತ್ತೂರು ನಗರಸಭೆ ಕಾರ್ಯಾಲಯಕ್ಕೆ ತಿಳಿಸಬೇಕು.
ತಮ್ಮ ಸಂಸ್ಥೆಯ ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರವೇಶ ನಿಯಂತ್ರಿಸಲು ಕ್ರಮ ವಹಿಸಬೇಕು. ಪುತ್ತೂರು ನಗರಸಭೆಯಿಂದ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಸಹಕರಿಸಲು ಹಾಗು ಅವುಗಳ ಪ್ರವೇಶ ನಿರ್ಬಂಧಿಸುವುದನ್ನು ಮೇಲ್ವಿಚಾರಣೆ ಮಾಡಲು ತಮ್ಮ ಸಂಸ್ಥೆ ವತಿಯಿಂದ ಒಬ್ಬ ಜವಾಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಈ ಬಗ್ಗೆ ಪುತ್ತೂರು ನಗರಸಭಾ ಕಾರ್ಯಾಲಯಕ್ಕೆ ಮಾಹಿತಿಯೊಂದಿಗೆ ವರದಿ ನೀಡಬೇಕು. ಬೀದಿ ನಾಯಿಗಳು ಆವರಣದೊಳಗೆ ಪ್ರವೇಶಿಸುವುದನ್ನು ನಿಯಂತ್ರಿಸಲು ತಮ್ಮ ಸಂಸ್ಥೆಯ ಆವರಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯಗಳ ಸಂಗ್ರಹಣೆ, ದಾಸ್ತಾನು ಮತ್ತು ವಿಲೇವಾರಿ ಮಾಡಲು ಕಡ್ಡಾಯವಾಗಿ ಸೂಕ್ತ ಕ್ರಮ ವಹಿಸಬೇಕು. ತಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿ ಪುನ: ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಅವನ್ನು ಸ್ಥಳಾಂತರಿಸುವ ವೆಚ್ಚವನ್ನು ಸಂಸ್ಥೆಯಿಂದಲೇ ವಸೂಲಿ ಮಾಡಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ತಮ್ಮ ವಿರುದ್ದ ಕಾನೂನು ಕ್ರಮ ವಹಿಸಲಾಗುತ್ತದೆ ಎಂದು ಪುತ್ತೂರು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














0 comments:
Post a Comment