ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ, ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ಮಂಗಳೂರು, ನವೆಂಬರ್ 01, 2025 (ಕರಾವಳಿ ಟೈಮ್ಸ್) : ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎಂದು ಹುಯಿಲಗೋಳ ನಾರಾಯಣರಾಯರು ಬರೆದ ಕವಿತೆಯ ಸಾಲುಗಳನ್ನು ನಾವು ನೆನಪಿಸಿಕೊಳ್ಳಬಹುದು. ಏಕೆಂದರೆ ಕರ್ನಾಟಕ ರಾಜ್ಯವು ಏಕೀಕರಣವಾಗಿ 69 ವರ್ಷಗಳು ಪೂರ್ಣಗೊಂಡಿರುವ ಶುಭ ಸಂದರ್ಭದಲ್ಲಿ ನಾವಿದ್ದೇವೆ. ಎಲ್ಲರ ಬದುಕಿನಲ್ಲೂ ಸುಖಶಾಂತಿ, ನೆಮ್ಮದಿ ನೆಲೆಸುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾರೈಸಿದರು.
ನಗರದ ನೆಹರೂ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಪ್ರಶಸ್ತಿ ವಿಜೇತರನ್ನು ಗೌರವಿಸಿ ಮಾತನಾಡಿದ ಅವರು, ಪ್ರಾಕೃತಿಕವಾಗಿ ಶ್ರೀಮಂತವಾದ ಕರ್ನಾಟಕ ರಾಜ್ಯದಲ್ಲಿ ಜನಿಸಿದ ನಾವೆಲ್ಲರೂ ಭಾಗ್ಯಶಾಲಿಗಳಾಗಿದ್ದೇವೆ. ಬ್ರಿಟಿಷರ ಅಧಿಕಾರದ ಅವಧಿಯಲ್ಲಿ ಮೈಸೂರು, ಮುಂಬೈ, ಹೈದರಾಬಾದ್, ಮದ್ರಾಸ್ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಏಕೀಕರಣ ಚಳವಳಿ ಮೂಲಕ ಹಲವು ವರ್ಷಗಳವರೆಗೆ ನಿರಂತರ ಹೋರಾಟ ನಡೆಸಿದ ಪ್ರತಿಫಲವಾಗಿ 1956ರ ನವೆಂಬರ್ 1ರಂದು ನಮ್ಮ ರಾಜ್ಯ ಉದಯವಾಯಿತು. ಇದಕ್ಕಾಗಿ ಹೋರಾಡಿದ ಅನೇಕ ಮಹನೀಯರನ್ನು ಸಾಹಿತಿಗಳನ್ನು ಸಂಘ ಸಂಸ್ಥೆಗಳನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ ಎಂದರು.
ಕನ್ನಡ ನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿರಿಮೆ ತುಂಬಾ ವೈಶಿಷ್ಟ್ಯತೆಗಳಿಂದ ಕೂಡಿದೆ. ಅನೇಕ ಸುಪ್ರಸಿದ್ದ ರಾಜಮನೆತನದವರು, ಧೀರರು ಈ ನಾಡಿನಲ್ಲಿ ಆಳ್ವಿಕೆ ನಡೆಸಿ ಅನೇಕ ಅಮೂಲ್ಯ ಮತ್ತು ಜನಪರವಾದ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿರುತ್ತಾರೆ. ಇವರು ತಮ್ಮ ಆಡಳಿತದ ಕಾಲದಲ್ಲಿ ಕನ್ನಡನಾಡು-ನುಡಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದು ಅವರೆಲ್ಲರ ಕೊಡುಗೆಯನ್ನು ಸ್ಮರಿಸುತ್ತೇನೆ ಎಂದ ಅವರು, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಗೌರವಿಸಬೇಕು ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರೂ ಪ್ರತಿಪಾದಿಸಿದ್ದರು ಎಂಬುದನ್ನು ನಾವು ಮನಗಾಣಬೇಕಿದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು ಹಲವು ಧರ್ಮ, ಜನಾಂಗ ಮತ್ತು ರೈತರ ಕಾಯಕ ಭೂಮಿಯಾಗಿದೆ. ಕರ್ನಾಟಕದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಜೀವನಪದ್ಧತಿ ನೆಲೆಸಿದೆ. ಭಾವೈಕ್ಯತೆಯ ಸ್ವರ್ಗವಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಸರ್ವಧರ್ಮಗಳ ಸಮನ್ವಯತೆ, ಸೌಹಾರ್ದತೆ ಇಲ್ಲಿ ಮನೆಮಾಡಿವೆ ಎಂದರು.
ದೇಶಕ್ಕೆ ನಮ್ಮ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ. ಕನ್ನಡದ ಜಾನಪದ ಕಲೆಯೂ ಶ್ರೀಮಂತವಾಗಿದೆ. ಗ್ರಾಮೀಣ ಭಾಗದ ಜನಸಮುದಾಯದಿಂದಲೇ ಈ ಜನಪದ ಕಲೆ ಗಟ್ಟಿಯಾಗಿ ಬೇರೂರಿದೆ ಎಂಬುದು ವಿಶೇಷ ಸಂಗತಿಯಾಗಿದೆ. ಂತ್ರಜ್ಞಾನದ ವೇಗದಲ್ಲಿ ಹಾಗೂ ಇಂದಿನ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯು ಹಿಂದುಳಿಯದಂತೆ ಸರಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಒತ್ತು ನೀಡಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಮೊಬೈಲ್‍ನಲ್ಲಿ ಕನ್ನಡ ಬಳಕೆ, ಬೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ. ಕನ್ನಡಕ್ಕೆ ಸಂಬಂಧಿಸಿದ ಹಲವಾರು ಸಾಫ್ಟ್ ವೇರ್‍ಗಳು ಇಂದು ಅಸ್ತಿತ್ವದಲ್ಲಿವೆ. ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿದೆ ಎಂದು ಸಚಿವರು ಹೇಳಿದರು.
ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆಯ ವ್ಯಾಮೋಹವೂ ಅತಿಯಾಗಿರಬಾರದು, ಆದರೆ ಕನ್ನಡ ಅಭಿಮಾನ ಇರಲೇಬೇಕು, ಅಭಿಮಾನವಿದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ. ಕನ್ನಡ ಭಾಷೆ ತಿಳಿಯದವರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು ಎಂದು ದಿನೇಶ್ ಗುಂಡೂರಾವ್, ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರಾಗಲಿ, ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡಿಗರೇ, ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದರು.
ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವಜನಾಂಗದಲ್ಲಿ ಮತ್ತು ಮಕ್ಕಳಲ್ಲಿ ಇನ್ನಷ್ಟು ಪ್ರೀತಿ ಮತ್ತು ಕಾಳಜಿ ಮೂಡುವಂತೆ ನಾವು ಪಾಲಕರು ಗಮನಹರಿಸಬೇಕು. ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುವುದೇ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು ಅನೇಕ ಜನಪರ ಕಾರ್ಯಕ್ರಮಗಳನ್ನು ಘೋಷಿಸಿ ಜಾರಿಗೆ ತರಲಾಗಿದೆ ಎಂದರು.
ಆಡಳಿತವನ್ನು ಜನಸಾಮಾನ್ಯರತ್ತ ಕೊಂಡೊಯ್ದು ಅವರಲ್ಲಿ ಸಂತೃಪ್ತಿಯನ್ನು ಮೂಡಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಪರಿಶಿಷ್ಠ ಜನಾಂಗ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ವಿಶೇಷವಾಗಿ ದುರ್ಬಲರು ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು ಪ್ರತಿಯೊಬ್ಬರಲ್ಲಿಯೂ ಹರುಷವನ್ನು ತಂದಿದೆ. ರಾಜ್ಯದ ಬಹುತೇಕ ಜನರು ಇಂದು ಸರಕಾರದ ಒಂದಿಲ್ಲೊಂದು ಯೋಜನೆಯಲ್ಲಿ ನೇರ ಫಲಾನುಭವಿಗಳಾಗಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದ ಅವರು, ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸುಖೀ ರಾಜ್ಯ ನಿರ್ಮಿಸುವತ್ತ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದೇವೆ. ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅತ್ಯಂತ ಸರಳವಾದ ಪ್ರಕ್ರಿಯೆಯು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಆ ಮೂಲಕ ಜನಸಾಮಾನ್ಯರ ಮನೆಬಾಗಿಲಿಗೆ ಗ್ಯಾರಂಟಿ ಯೋಜನೆಗಳು ಸರಾಗವಾಗಿ ತಲುಪಿವೆ. ಆರ್ಥಿಕ ಸಶಕ್ತತೆ ಮತ್ತು ಮಹಿಳಾ ಸಬಲೀಕರಣದ ಮೂಲಕ ರಾಜ್ಯದ ಜನರು ನೆಮ್ಮದಿ, ಘನತೆ ಮತ್ತು ಗೌರವದಿಂದ ಜೀವನ ಸಾಗಿಸುತ್ತಿರುವುದು ಪ್ರಚಲಿತ ಜಗತ್ತಿನ ಮಹತ್ತರ ವಿದ್ಯಮಾನವಾಗಿದೆ ಎಂದು ಶ್ಲಾಘಿಸಿದರು.
ಸೋಮೇಶ್ವರ, ಬಜಪೆ, ಕಿನ್ನಿಗೋಳಿ, ಮೂಲ್ಕಿ ಮತ್ತು ಮೂಡಬಿದ್ರೆ ಪಟ್ಟಣಗಳಿಗೆ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಕಾಮಗಾರಿಗಳು ಹಾಗೂ ಬಂಟ್ವಾಳ ಮತ್ತು ಉಳ್ಳಾಲ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದ ಸಚಿವರು, ಸಣ್ಣ ನೀರಾವರಿ ಇಲಾಖೆಯಿಂದ ನೇತ್ರಾವತಿ ಎಡದಂಡೆ ಸಂರಕ್ಷಿಸಲು ಉಳ್ಳಾಲ ತಾಲೂಕಿನ ಪಾವೂರು-ಬೋಳಿಯಾರುವರೆಗೆ 40 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ, ಜಲಜೀವನ್ ಮಿಷನ್ ಯೋಜನೆಯಡಿ ಒಟ್ಟು 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಜಿಲ್ಲೆಯ 223 ಗ್ರಾಮ ಪಂಚಾಯತ್ ಗಳು ಒಣ ತ್ಯಾಜ್ಯವನ್ನು ನಿರ್ವಹಿಸಲು ಎಂ.ಆರ್.ಎಫ್. ಘಟಕ ಸೌಲಭ್ಯ ಕಲ್ಪಿಸಿರುವ ರಾಜ್ಯದ ಮೊದಲ ಜಿಲ್ಲೆಯಾಗಿದೆ ಎಂದ ಅವರು, ಜಿಲ್ಲಾ ವೆನ್ಹಾಕ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕ್ಯಾಥ್ ಲ್ಯಾಬ್ ಅನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿಸಿದೆ. ಆ ಮೂಲಕ ಅತಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ಉನ್ನತ ಹೃದ್ರೋಗ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. 90 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಹೊರರೋಗಿ ವಿಭಾಗ (ಒಪಿಡಿ) ಕಟ್ಟಡ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದರು.
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯ 18 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ (ಕೆ.ಪಿ.ಎಸ್) ಗಳನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ಇತ್ತೀಚೆಗೆ ಮಂಜೂರಾತಿ ನೀಡಿದೆ. ನರ್ಸರಿಯಿಂದ ಪದವಿಪೂರ್ವ ಶಿಕ್ಷಣದವರೆಗೆ ಒಂದೇ ಕ್ಯಾಂಪಸ್‍ನಲ್ಲಿ ಉನ್ನತ ಗುಣಮಟ್ಟದ ಶಿಕ್ಷಣವನ್ನೊದಗಿಸುವ ಕೆಪಿಎಸ್ ಮಾದರಿಯನ್ನು ಜಿಲ್ಲೆಯ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲು ಗಮನಹರಿಸಲಾಗುವುದು ಎಂದ ಸಚಿವ ರಾವ್, ಪಣಂಬೂರು ಮತ್ತು ತಣ್ಣೀರುಬಾವಿ ಕಡಲತೀರಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲು ಕಾರ್ಯಾದೇಶ ನೀಡಲಾಗಿರುತ್ತದೆ. ವಿವಿಧ ಪ್ರವಾಸಿ ಕಾರ್ಯಕ್ರಮಗಳಿಗೆ ಅನುದಾನ ನೀಡುವ ಮೂಲಕ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಒತ್ತು ನೀಡಲಾಗುತ್ತಿದೆ ಎಂದರು.
ಮಂಗಳೂರಿನಲ್ಲಿ ಬಹುನಿರೀಕ್ಷಿತ ರಂಗಮಂದಿರ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಆ ಮೂಲಕ ಜಿಲ್ಲೆಯ ಸಾಹಿತ್ಯ ರಂಗಾಸಕ್ತರ ದೀರ್ಘಕಾಲದ ಬೇಡಿಕೆಗೆ ಸರಕಾರ ಸ್ಪಂದಿಸಿದೆ ಎಂದು ಹೇಳಿದ ಸಚಿವ ದಿನೇಶ್ ಗುಂಡೂರಾವ್, ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕೊಂಕಣಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಹೊಸದಾಗಿ ಬ್ಯಾರಿ ಭವನವನ್ನು ಉಳ್ಳಾಲ ತಾಲೂಕಿನ ಅಸೈಗೋಳಿ ಎಂಬಲ್ಲಿ ನಿರ್ಮಿಸಲು ರಾಜ್ಯ ಸರಕಾರ ಮಂಜೂರಾತಿ ನೀಡಿದೆ ಎಂದರು.
ಮಂಗಳೂರು ತಾಲೂಕಿನ ಕಸಬಾ ಹೋಬಳಿಯ ದೇರೆಬೈಲ್ ಗ್ರಾಮದ ಸರ್ವೆ ನಂ.129 ಮತ್ತು 113 ರಲ್ಲಿ 3.285 ಎಕ್ರೆ ಭೂಮಿಯನ್ನು “ವಾಣಿಜ್ಯ ಕಚೇರಿ ಟೆಕ್ ಪಾರ್ಕ್” ಆಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರವು ಈಗಾಗಲೇ ಅನುಮೋದನೆ ನೀಡಿದೆ. ಈ ಯೋಜನೆಯ ಪ್ರಾಥಮಿಕ ಉದ್ದೇಶವು ಪ್ರದೇಶದ ತಾಂತ್ರಿಕ ಭೂದೃಶ್ಯವನ್ನು ಹೆಚ್ಚಿಸುವುದು, ವೈವಿಧ್ಯಮಯ ತಂತ್ರಜ್ಞಾನ ಕಂಪೆನಿಗಳನ್ನು ಆಕರ್ಷಿಸುವುದು ಮತ್ತು ಗಣನೀಯ ಆರ್ಥಿಕ ಮತ್ತು ಉದ್ಯೋಗ ಬೆಳವಣಿಗೆಯನ್ನು ಹೆಚ್ಚಿಸುವುದಾಗಿದೆ. ಈ ಯೋಜನೆಯಿಂದ ಉದ್ಯೋಗಗಳ ಸೃಷ್ಟಿಯೊಂದಿಗೆ ಸ್ಥಳೀಯ ಜೀವನೋಪಾಯ ಮತ್ತು ಒಟ್ಟಾರೆ ಸಮೃದ್ಧಿ ಸುಧಾರಣೆಯ ನಿರೀಕ್ಷೆಯಿದೆ ಎಂದ ಸಚಿವರು, ನಗರ ವ್ಯಾಪ್ತಿಯಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ತಲಪಾಡಿಯಿಂದ ಸುರತ್ಕಲ್ ವರೆಗೆ ರಿಂಗ್ ರೋಡ್ ನಿರ್ಮಿಸಲು ಸರಕಾರ ಯೋಜನೆ ರೂಪಿಸಲಿದೆ ಎಂದರು.
ಸಹಬಾಳ್ವೆ, ಸಹಿಷ್ಣುತೆಗೆ ಹೆಸರಾದ ನಾವೆಲ್ಲರೂ ಈ ನಾಡಿನ ಪರಂಪರೆ, ಐತಿಹಾಸಿಕತೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸದಾ ಬದ್ಧರಾಗಿರಬೇಕು. ಜಾತಿ-ಮತಗಳ ಬೇದಭಾವವನ್ನು ತೊರೆದು ಜಿಲ್ಲೆಯ ಎಲ್ಲ ಜನತೆ ಸಹೋದರ ಭಾವನೆಯಿಂದ ನಡೆದುಕೊಳ್ಳುವುದರ ಮೂಲಕ ರಾಜ್ಯ ಹಾಗೂ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ, ಈ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ನಾವೆಲ್ಲರೂ ಸೇರಿ ಶ್ರಮಿಸೋಣ. ನಾಡಿನ ಮತ್ತು ಜಿಲ್ಲೆಯ ಭೌತಿಕ, ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿಯೂ ಸೇರಿದಂತೆ ಸರ್ವಾಂಗೀಣ ಪ್ರಗತಿ ಸಾಧಿಸಲು ನಾವೆಲ್ಲರೂ ಕಂಕಣಬದ್ದರಾಗಿ ಶ್ರಮಿಸೋಣ. ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕವನ್ನು ನಿರ್ಮಿಸಲು ಪಣ ತೊಡೋಣ ಎಂದು ಸಚಿವರು ಕರೆ ನೀಡಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜಾ, ಡಾ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಜಿಲ್ಲಾ ಎಸ್ಪಿ ಡಾ ಅರುಣ್ ಕೆ, ವಿಶೇಷ ಆಹ್ವಾನಿತರಾದ ಪದ್ಮಶ್ರೀ ಹಜಬ್ಬ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





















0 comments:
Post a Comment