ಬಂಟ್ವಾಳ, ನವೆಂಬರ್ 27, 2025 (ಕರಾವಳಿ ಟೈಮ್ಸ್) : ಮಲ್ಲಿಗೆ ಕೃಷಿಗೆ ಸರಕಾರದಿಂದ ಸಾಲ ಪಡೆದರೆ ಸಬ್ಸಿಡಿ ಸಿಗುತ್ತಿದ್ದು, ಅದಕ್ಕೆ ಅರ್ಜಿ ಸಲ್ಲಿಸಲು ಎಂದು ಹಣ ತೆಗೆದು ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ವಿಟ್ಲ ಕಸಬಾ ಗ್ರಾಮದ ಕಡಂಬು ನಿವಾಸಿ ಲಾರೆನ್ಸ್ ರೋಡ್ರಿಗಸ್ ಅವರ ಪತ್ನಿ ಬೀನಾ ರೋಡ್ರಿಗಸ್ (55) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರಿಗೆ ಪರಿಚಯದ ಫಿಲೋಮಿನಾ ಡಿಸೋಜಾ ಅವರು 2024ನೇ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಬೀನಾ ರೋಡ್ರಿಗಸ್ ಅವರಲ್ಲಿ ಮಲ್ಲಿಗೆ ಕೃಷಿಗಾಗಿ ತಾನು ಸರ್ಕಾರದಿಂದ ಲೋನ್ ಪಡೆಯುತ್ತಿದ್ದು ಅದರಲ್ಲಿ ಹೆಚ್ಚಿನ ಸಬ್ಸಿಡಿ ಹಣ ಸಿಗುವುದರಲ್ಲಿ ಪಾಲು ಹಣ ನೀಡುವುದಾಗಿ ಹೇಳಿದ್ದಾರೆ. ಸದ್ರಿ ಸಬ್ಸಿಡಿ ಹಣಕ್ಕಾಗಿ ಅರ್ಜಿ ಹಾಕಲು ಆರಂಭದಲ್ಲಿ 30 ಸಾವಿರ ರೂಪಾಯಿ ಹಣ ಕಟ್ಟಬೇಕಾಗುತ್ತದೆ ಎಂದು ಹೇಳಿದ ಮೇರೆಗೆ ಬೀನಾ ರೋಡ್ರಿಗಸ್ ಅವರು 2024 ರ ಅಕ್ಟೋಬರ್ 3 ರಂದು ಮನೆಯಲ್ಲೇ ಫಿಲೋಮಿನಾ ಅವರಿಗೆ 30 ಸಾವಿರ ರೂಪಾಯಿ ಹಣ ನೇರವಾಗಿ ಅವರ ಕೈಯಲ್ಲಿ ನೀಡಿದ್ದಾರೆ. ಬಳಿಕ ಫಿಲೋಮಿನಾ ಡಿ ಸೋಜಾ ಅವರು ಬೀನಾ ರೋಡ್ರಿಗಸ್ ಅವರಲ್ಲಿ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಉದ್ಯೋಗ ಖಾತರಿಯಲ್ಲಿ 10 ಲಕ್ಷ ಕಟ್ಟಿದ್ದಲ್ಲಿ ಇನ್ನೂ 10 ಲಕ್ಷ ಹೆಚ್ಚುವರಿ ಸಾಲ ದೊರೆಯುತ್ತಿದ್ದು, ಅದರಲ್ಲಿ 75 ಶೇಕಡಾ ಸಾಲ ಮನ್ನಾ ದೊರೆಯುತ್ತದೆ ಎಂದು ನಂಬಿಸಿ ಸಬ್ಸಿಡಿ ಮೌಲ್ಯವನ್ನು 10 ಲಕ್ಷಕ್ಕೆ ಏರಿಸಲು ಹೆಚ್ಚುವರಿ ಹಣವನ್ನು ಪಾವತಿಸುವಂತೆ ಹೇಳಿದ್ದಲ್ಲದೇ ನಂತರದಲ್ಲಿ ಫಿಲೋಮಿನಾ ಅವರು ಬೀನಾ ಅವರಲ್ಲಿ ಪ್ರತೀ ಸಲ ಒಂದೊಂದು ಕಾರಣ ಹೇಳುತ್ತಾ ಮಲ್ಲಿಗೆ ಕೃಷಿಗಾಗಿ ಸರ್ಕಾರದಿಂದ ಬರುವ ಸಬ್ಸಿಡಿಯಲ್ಲಿ ಪಾಲು ಹಣ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ನಂತರ ಹೆಚ್ಚು ಸಬ್ಸಿಡಿಯಲ್ಲಿ ಹೆಚ್ಚು ಹಣವನ್ನು ಕೊಡುವುದಾಗಿ ಮತ್ತು ಲೋನ್ ಪಡೆದ ಬಡ್ಡಿಯನ್ನು ಹಿಂತಿರುಗಿಸುತ್ತೇನೆಂದು ನಂಬಿಸಿ 2024 ರ ಅಕ್ಟೋಬರ್ 3 ರಿಂದ 2025 ರ ನವೆಂಬರ್ 19ರವರೆಗೆ ಹಂತ ಹಂತವಾಗಿ ಒಟ್ಟು 70 ಲಕ್ಷ ರೂಪಾಯಿ ಹಣವನ್ನು ಫಿಲೋಮಿನಾ ಡಿ ಸೋಜಾ ಅವರು ಬೀನಾ ರೋಡ್ರಿಗಸ್ ಅವರಿಂದ ಮೋಸದಿಂದ ಪಡೆದು ವಂಚನೆ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment