ಮಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಶಾಮುಕ್ತ ಕ್ಯಾಂಪಸ್ ಹಾಗೂ ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನ
ಮಂಗಳೂರು, ನವೆಂಬರ್ 29, 2025 (ಕರಾವಳಿ ಟೈಮ್ಸ್) : ನಮ್ಮ ದೇಶವನ್ನು, ರಾಜ್ಯವನ್ನು ನಶಾಮುಕ್ತ ಹಾಗೂ ದ್ವೇಷಮುಕ್ತಗೊಳಿಸುವ ಮೂಲಕ ಆಹ್ಲಾದಕರ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಬೇಕಿದೆ ಎಂದು ವಿಧಾನಸಭಾಧ್ಯಕ್ಷ ಡಾ ಯು.ಟಿ. ಖಾದರ್ ಹೇಳಿದರು.
ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆರ್.ಜಿ.ಯು.ಎಚ್.ಎಸ್. ಕಾಲೇಜುಗಳ ಮ್ಯಾನೇಜ್ ಮೆಂಟ್ ಎಸೋಸಿಯೇಶನ್ ಸಂಯುಕ್ತವಾಗಿ ಆಯೋಜಿಸಿದ್ದ ನಶಾಮುಕ್ತ ಕ್ಯಾಂಪಸ್ ಮತ್ತು ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನದ ವಾಕ್ ಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶ ಮತ್ತು ರಾಜ್ಯ ಮುಂಚೂಣಿಯಲ್ಲಿರಬೇಕಾದರೆ ನಶೆ ಹಾಗೂ ದ್ವೇಷ ಎಂಬ ಎರಡು ದುಷ್ಟ ಶಕ್ತಿಗಳನ್ನು ನಿಗ್ರಹಿಸುವುದು ಅನಿವಾರ್ಯ ಎಂದವರು ಹೇಳಿದರು.
ನಶಾಮುಕ್ತ ಕ್ಯಾಂಪಸ್ ಹಾಗೂ ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನಗಳು ಭಾರತದ ಭವಿಷ್ಯವನ್ನು ರೂಪಿಸುವ ಪ್ರಮುಖ ಉಪಕ್ರಮಗಳು. ಒಂದು ದಿನದ ವಾಕ್ ಥಾನ್ ನೊಂದಿಗೆ ಮುಕ್ತಾಯಗೊಳ್ಳಬಾರದು. ವಿದ್ಯಾರ್ಥಿಗಳು ಜನಜಾಗೃತಿ ರಾಯಭಾರಿಗಳಾಗಿ ಎಲ್ಲೆಡೆ ಈ ಸಂದೇಶವನ್ನು ಹರಡಬೇಕು. ಬದಲಾವಣೆ ಒಂದೇ ದಿನದಲ್ಲಿ ಸಂಭವಿಸದು. ನಿರಂತರ ಮತ್ತು ಒಗ್ಗಟ್ಟಿನ ಪ್ರಯತ್ನ ಅಗತ್ಯ ಎಂದು ಸ್ಪೀಕರ್ ಖಾದರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವಿದ್ಯಾರ್ಥಿ ಜೀವನ ಭವಿಷ್ಯವನ್ನು ನಿರ್ಮಿಸುವ ಮುಖ್ಯ ಹಂತ. ಈ ಸಂದರ್ಭದಲ್ಲಿ ಸ್ವಯಂ ನಿಯಂತ್ರಣ ಸಾಧಿಸಿದರೆ ಮುಂದಿನ ಜೀವನ ಯಶಸ್ವಿಯಾಗುತ್ತದೆ. ಕ್ಷಣಿಕ ಆಕರ್ಷಣೆಗಳಿಂದ ದೂರವಿದ್ದು, ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸಿದರೆ ಉತ್ತಮ ಜೀವನ ಖಚಿತ ಎಂದವರು ಸಲಹೆ ನೀಡಿದರು.
ನಮ್ಮ ವಿದ್ಯಾರ್ಥಿಗಳೇ ನಮ್ಮ ಆಸ್ತಿ : ಕುಲಪತಿ ಡಾ. ಭಗವಾನ್ ಬಿ.ಸಿ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, ದೇಶದ ಯುವ ಸಮುದಾಯ ವಿಶೇಷವಾಗಿ ಕರ್ನಾಟಕದ ವಿದ್ಯಾರ್ಥಿಗಳು ಡ್ರಗ್ ಮಾಫಿಯಾಕ್ಕೆ ಗುರಿಯಾಗುತ್ತಿರುವುದು ಗಂಭೀರ ಸಮಸ್ಯೆ ಎಂದು ಆತಂಕ ವ್ಯಕ್ತಪಡಿಸಿದರು.
ಪಂಜಾಬ್, ಕೇರಳ ಮತ್ತು ಉತ್ತರ ಭಾರತದ ರಾಜ್ಯಗಳ ನಂತರ ಡ್ರಗ್ ಪೆಡ್ಲರ್ ಗಳ ದೃಷ್ಟಿ ಕರ್ನಾಟಕದತ್ತ ತಿರುಗಿದೆ. ದೇಶದಾದ್ಯಂತ 20-30% ವಿದ್ಯಾರ್ಥಿಗಳು ಒಂದಲ್ಲೊಂದು ಮಾದಕ ದ್ರವ್ಯದ ಪ್ರಭಾವಕ್ಕೆ ಒಳಗಾಗಿರುವುದು ಆತಂಕಕಾರಿ ವಿಷಯ. ವಿದ್ಯಾರ್ಥಿಗಳನ್ನು ಈ ವಿಷಜಾಲದಿಂದ ರಕ್ಷಿಸುವ ನಿಟ್ಟಿನಲ್ಲಿ ಆರ್.ಜಿ.ಯು.ಎಚ್.ಎಸ್. ರಾಜ್ಯವ್ಯಾಪಿ ನಶಾಮುಕ್ತ ಕ್ಯಾಂಪಸ್ ಅಭಿಯಾನ ಆರಂಭಿಸಿದೆ ಎಂದರು.
3.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ರಕ್ಷಣೆ ನಮ್ಮ ಆದ್ಯತೆ. ಕ್ಯಾಂಪಸ್‍ಗಳ ಸುತ್ತಮುತ್ತ ಮಾದಕ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಪ್ರತಿಯೊಂದು ಕಾಲೇಜಿನಲ್ಲೂ ಟಾಸ್ಕ್ ಫೆÇೀರ್ಸ್ ಸಮಿತಿ ರಚಿಸಲಾಗಿದೆ. ಜಾಗೃತಿ ಜಾಥಾ, ಕಾರ್ಯಾಗಾರಗಳು, ಅಭಿಯಾನಗಳ ಮೂಲಕ ವಿದ್ಯಾರ್ಥಿಗಳನ್ನು ಡ್ರಗ್ಸ್, ತಂಬಾಕು, ಮದ್ಯಪಾನದ ದುಷ್ಪರಿಣಾಮಗಳಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ ಎಂದರು.
ನಶಾಮುಕ್ತ ಜೀವನವೇ ಆರೋಗ್ಯಪೂರ್ಣ ಜೀವನ. ಇಂದು ಇಲ್ಲಿ ಸೇರಿರುವ ನೀವು 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ನಾನು ಯಾವುದೇ ದುಶ್ಚಟಗಳಿಗೆ ಒಳಗಾಗುವುದಿಲ್ಲ, ಡ್ರಗ್ ಫೆಡ್ಲರ್ ಗಳ ಬಲೆಗೆ ಬೀಳುವುದಿಲ್ಲ, ನನ್ನ ಸ್ನೇಹಿತರನ್ನೂ ವ್ಯಸನಕ್ಕೆ ನೂಕುವುದಿಲ್ಲ, ಕ್ಯಾಂಪಸ್ಸಿನಲ್ಲಿ ಯಾವುದೇ ಮಾದಕ ವಸ್ತು ಕಂಡುಬಂದರೂ ಸುಮ್ಮನಿರುವುದಿಲ್ಲ” ಎಂದು ಪ್ರತಿಜ್ಞೆ ಮಾಡಬೇಕು ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾವಿರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು. ಇದೇ ಸಂದಭ ವಿದ್ಯಾರ್ಥಿಗಳಿಗೆ ಅಂಗಾಂಗ ದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.


















0 comments:
Post a Comment