ಪುತ್ತೂರು, ಡಿಸೆಂಬರ್ 09, 2025 (ಕರಾವಳಿ ಟೈಮ್ಸ್) : ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜ ತುಂಬಿದ ಗೋಣಿಚೀಲಗಳನ್ನು ಕಳವುಗೈದ ಪ್ರಕರಣ ಬೇಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು ಕಾಫಿ ಚೀಲಗಳು, ವಾಹನಗಳ ಸಹಿತ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಆಶ್ಲೇಷ ಭಟ್, ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಹಾಗೂ ಮಹಮ್ಮದ್ ಅಶ್ರಫ್ ಎಂದು ಹೆಸರಿಸಲಾಗಿದೆ.
ಪುತ್ತೂರು, ಕಬಕ ನಿವಾಸಿ ತೃತೇಶ್ (29) ಎಂಬವರು ಕೆಎ19 ಎಬಿ2258 ನೋಂದಣಿ ಸಂಖ್ಯೆಯ ಲಾರಿಯ ಮಾಲಕ ಮತ್ತು ಚಾಲಕರಾಗಿದ್ದು, ಡಿಸೆಂಬರ್ 3 ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯೊಂದರಿಂದ ತಲಾ 60 ಕೆಜಿ ತೂಕದ 320 ಕಾಫಿ ಬೀಜ ತುಂಬಿದ ಗೋಣಿ ಚೀಲ ಬ್ಯಾಗ್ ಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುತ್ತಿದ್ದವರು, ಅದೇ ದಿನ ರಾತ್ರಿ ಪುತ್ತೂರಿಗೆ ತಲುಪಿ, ಕಬಕ-ನೆಹರೂ ನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಡೋರ್ ಲಾಕ್ ಮಾಡಿ ತನ್ನ ಮನೆಗೆ ತೆರಳಿದ್ದರು.
ಮರುದಿನ ಅಂದರೆ ಡಿಸೆಂಬರ್ 4 ರಂದು ಬೆಳಿಗ್ಗೆ ಮರಳಿ ಬಂದು ಸದ್ರಿ ಲಾರಿಯನ್ನು ಚಲಾಯಿಸಿಕೊಂಡು ಮಧ್ಯಾಹ್ನ ವೇಳೆ ಮಂಗಳೂರಿನ ಬಂದರಿಗೆ ತಲುಪಿದ್ದಾರೆ. ಈ ವೇಳೆ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಲು ಬಂದಾಗ, ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡು ಬಂದಿದ್ದು, ಲೋಡನ್ನು ಪರಿಶೀಲಿಸಿದಾಗ, ಲಾರಿಯಲ್ಲಿದ್ದ ಕಾಫಿ ಬೀಜ ತುಂಬಿದ ಗೋಣಿ ಚೀಲಗಳ ಪೈಕಿ ಸುಮಾರು 21.44ನ ಲಕ್ಷ ರೂಪಾಯಿ ಮೌಲ್ಯದ 80 ಗೋಣಿ ಚೀಲಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಲಾರಿ ಮಾಲಕನ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಆಶ್ಲೇಷ ಭಟ್ ಎಂಬಾತ ತನ್ನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಹಾಗೂ ಮಹಮ್ಮದ್ ಅಶ್ರಫ್ ಎಂಬವರೊಂದಿಗೆ ಸೇರಿಕೊಂಡು ಕೃತ್ಯ ನಡೆಸಿರುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೆÇೀಗಳ ಸಹಿತ ಕಳವಾದ 60 ಕೆಜಿ ತೂಕದ ಕಾಫಿ ತುಂಬಿದ 80 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.



















0 comments:
Post a Comment