ಬೆಳಗಾವಿ, ಡಿಸೆಂಬರ್ 09, 2025 (ಕರಾವಳಿ ಟೈಮ್ಸ್) : ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕರಾವಳಿ ಜಿಲ್ಲೆಗಳು ಭೌಗೋಳಿಕವಾಗಿ ಭಿನ್ನವಾಗಿರುವುದರಿಂದ ಈ ಜಿಲ್ಲೆಗಳಿಗೆ ಅನ್ವಯವಾಗುವಂತೆ ಏಕ/ ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತು ವಿಶೇಷ ಸೇವೆಗಳನ್ನು ಕಲ್ಪಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಮಂಜುನಾಥ ಭಂಡಾರಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡದೇ ಇರುವ ಗ್ರಾಮ ಪಂಚಾಯತಿಯಲ್ಲಿನ ಒಂದು ಎಕರೆ ಒಳಗಿನ ಜಮೀನುಗಳಿಗೆ ಅನುಮೋದನೆ ನೀಡುವ ಪ್ರಕರಣಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಸಹಾಯಕ ನಿರ್ದೇಶಕರ ಕಛೇರಿ ಹಾಗೂ ಹತ್ತಿರದ ಯೋಜನಾ ಪ್ರಾಧಿಕಾರಗಳ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ, ತಾಲೂಕು ಪಂಚಾಯತಿ ಕಛೇರಿಯಲ್ಲಿಯೇ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ.
ಕರಾವಳಿ ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಏಕ/ ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತ ನಿಯಮಗಳನ್ನು ಸಮನ್ವಯಗೊಳಿಸಲು ಮತ್ತು ವಿನ್ಯಾಸ ಅನುಮೋದನೆಯನ್ನು ಪಾರದರ್ಶಕತೆ ಹಾಗೂ ಜನ ಸ್ನೇಹಿಯಾಗಿಸಲು ಅನುಕೂಲವಾಗುವಂತೆ ಸೆಂಟರ್ ಫಾರ್ ಇ ಗವರ್ನೆನ್ಸ್ ವತಿಯಿಂದ ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ ಮೆಂಟ್ ಸಿಸ್ಟಂ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.














0 comments:
Post a Comment