ಬಂಟ್ವಾಳ, ಡಿಸೆಂಬರ್ 22, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಶ್ರೀ ಶಾರದಾ ಹೈಸ್ಕೂಲ್ ಎದರಿನ ಮನೆಯೊಂದರಲ್ಲಿ ಅಕಸ್ಮಿಕ ಬೆಂಕಿ ಅವಘಡ ಉಂಟಾದ ಘಟನೆ ಸೋಮವಾರ ತಡ ರಾತ್ರಿ ಸಂಭವಿಸಿದೆ.
ಇಲ್ಲಿನ ನಿವಾಸಿ ದಿವಂಗತ ಮಂಜುನಾಥ್ ಎಂಬವರ ಪುತ್ರ ದಯಾನಂದ ಕುಲಾಲ್ ಎಂಬವರ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ರಾತ್ರಿ ಸುಮಾರು 10 ಗಂಟೆಯ ಬಳಿಕ ಸ್ಥಳೀಯ ಬಾಲಕರಾದ ಮುಸ್ತಫಾ ಹಾಗೂ ಆತನ ಸ್ನೇಹಿತ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಮನೆಯ ಮಾಡಿನ ಮೇಲೆ ಹೊಗೆಯಾಡುತ್ತಿರುವುದನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರಿಂದ ಸಂಭಾವ್ಯ ಭಾರೀ ಅವಘಡ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.
ಬಳಿಕ ಸ್ಥಳದಲ್ಲಿ ಜಮಾಯಿಸಿದ ಬಂಗ್ಲೆಗುಡ್ಡೆ, ನಂದಾವರ, ಆಲಡ್ಕ, ಗೂಡಿನಬಳಿ ಮೊದಲಾದೆಡೆಗಳಿಂದ ಸ್ಥಳಕ್ಕೆ ಬಂದ ಮುಸ್ಲಿಂ ಯುವಕರು ಆರಂಭಿಕ ಕಾರ್ಯಾಚರಣೆ ನಡೆಸಿ ಬೆಂಕಿ ಜ್ವಾಲೆಯನ್ನು ಒಂದಷ್ಟು ತಹಬದಿಗೆ ತಂದು ಬಳಿಕ ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಾದ ಚರಣ್, ಸತೀಶ್ ಕುಮಾರ್, ವಿನಯ ಹಾಗೂ ಸತೀಶ್ ಅವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಸಫಲರಾಗಿದ್ದಾರೆ.
ಬೆಂಕಿ ಅವಘಡದಿಂದಾಗಿ ಮನೆಯಲ್ಲಿನ ವಿದ್ಯುತ್ ಉಪಕರಣಗಳ ಸಹಿತ ಇತರ ಸಾಮಾಗ್ರಿಗಳೂ ಸುಟ್ಟು ಕರಕಲಾಗಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣದಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಸಿಬ್ಬಂದಿಗಳು ಶಂಕಿಸಿದ್ದಾರೆ. ಬೆಂಕಿ ಅವಘಡಕ್ಕೊಳಗಾದ ಮನೆ ಮಂದಿ ಪಕ್ಕದಲ್ಲೇ ಇರುವ ತಮ್ಮದೇ ಆರ್ ಸಿ ಸಿ ಮನೆಯಲ್ಲಿದ್ದುದರಿಂದ ಮನೆಯವರ ಗಮನಕ್ಕೆ ಬಂದಿರಲಿಲ್ಲ. ಪರಿಸರದಲ್ಲಿ ಅನೇಕ ವಾಸ್ತವ್ಯದ ಮನೆಗಳಿದ್ದು, ಪಕ್ಕದಲ್ಲೇ ವಿದ್ಯುತ್ ಕಂಬ, ತಂತಿಗಳೂ ಇತ್ತು. ಒಂದಷ್ಟು ತಡವಾಗಿದ್ದರೂ ಭಾರೀ ಪ್ರಮಾಣದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಸ್ಥಳೀಯ ಯುವಕರ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ತಹಬದಿಗೆ ಬಂದಿದೆ.


























0 comments:
Post a Comment