ಮಂಗಳೂರು, ಡಿಸೆಂಬರ್ 07, 2025 (ಕರಾವಳಿ ಟೈಮ್ಸ್) : ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು ಮಂಗಳೂರು ಮಹಾನಗರ ಪಾಲಿಕೆ ಅಯುಕ್ತರೊಂದಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ಅವ್ಯವಸ್ಥೆ, ಕುಡಿಯುವ ನೀರು, ಜನನ-ಮರಣ ಪತ್ರ, ಇ-ಖಾತಾ, ರಸ್ತೆ ಕಾಮಗಾರಿಗಳು, ಮೂಲಭೂತ ಸೌಕರ್ಯಗಳ ಬಗ್ಗೆ ಸುಮಾರು 100ಕ್ಕೂ ಅಧಿಕ ಮಂದಿ ಸಾರ್ವಜನಿಕರ ಸಮ್ಮುಖದಲ್ಲಿ ವಿವಿಧ ವಾರ್ಡುಗಳ ಸಮಸ್ಯೆಗಳ ಬಗ್ಗೆ ನಗರಪಾಲಿಕೆ ಅಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಮಾತನಾಡಿದ ಐವನ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಒಳಚರಂಡಿ ಸಮಸ್ಯೆ, ರಸ್ತೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅನುದಾನದ ಕೊರತೆ ಇದ್ದಲ್ಲಿ ಇದನ್ನು ಸಂಬಂಧಪಟ್ಟ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ನಗರ ಪಾಲಿಕೆಯ ಒಳಚರಂಡಿ ವ್ಯವಸ್ತೆಗೆ 1250 ಕೋಟಿ ಪ್ರಸ್ತಾವನೆಯನ್ನು ನಗರ ಪಾಲಿಕೆ ತಯಾರಿಸಿದೆ. ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿ ಯೋಜನೆಯನ್ನು ಹಂತ-ಹಂತವಾಗಿ ಕೈಗೊಳ್ಳುವಂತೆ ವಿಧಾನ ಪರಿಷತ್ ಸದನದಲ್ಲಿ ಚರ್ಚಿಸಿ ಹಾಗೂ ಸಚಿವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯ ನೆಹರೂ ಮೈದಾನದಲ್ಲಿರುವ ಡೀಮ್ಡ್ ಪಾರ್ಕ್ ಬಗ್ಗೆ ಅಯುಕ್ತರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭ ನಗರ ಪಾಲಿಕೆಯ ಹಿರಿಯ ಸದಸ್ಯರುಗಳಾದ ಭಾಸ್ಕರ್ ಮೊಯಿಲಿ, ಶಶಿಧರ್ ಹೆಗ್ಡೆ, ಅಶ್ರಫ್ ಬಜಾಲ್, ಕು ಅಪ್ಪಿ, ನಾಗೇಂದ್ರ ಕುಮಾರ್ ಜೆ, ನವೀನ್ ಡಿಸೋಜಾ, ಭಾಸ್ಕರ್ ರಾವ್, ಜೀನತ್ ಶಂಶುದ್ದೀನ್, ಸತೀಶ್ ಪೆಂಗಲ್, ಕಿಶೋರ್ ಕುಮಾರ್ ಶೆಟ್ಟಿ, ಚೇತನ್ ಕುಮಾರ್, ಹೇಮಂತ್ ಗರೋಡಿ, ಸೇಸಮ್ಮಕ್ಕ, ಪದ್ಮನಾಭ ಪಣಿಕ್ಕರ್, ಪ್ರಕಾಶ್ ಸಾಲ್ಯಾನ್, ಜೇಮ್ಸ್ ಪ್ರವೀಣ್, ಸ್ಟ್ಯಾನಿ ಅಳ್ವಾರಿಸ್, ಸ್ಟ್ಯಾನಿ ಲೋಬೋ, ಸಮರ್ಥ ಭಟ್, ಹಬೀಬುಲ್ಲ, ಅನಿಲ್ ಲೋಬೋ ಜೆಪ್ಪು, ಅಲ್ಟೀನ್ ಡಿಕುನ್ಹ ಮೊದಲಾದವರು ಸಲಹೆ ನೀಡಿದರು.
ನಗರಪಾಲಿಕೆ ಅಯಕ್ತ ರವಿಚಂದ್ರ ನಾಯಕ್ ಮಾತನಾಡಿ, ಎಲ್ಲಾ ಇಂಜಿನಿಯರ್ ಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ಮಾಡಿ ಆದ್ಯತೆಯ ಮೇರೆಗೆ ಎಲ್ಲಾ ಕಾಮಗಾರಿಗಳನ್ನು ಕಾರ್ಯಗತಮಾಡುವುದಾಗಿ ತಿಳಿಸಿದರು. ಯಾವುದೇ ನಿರ್ದಿಷ್ಟ ವಿಚಾರಗಳನ್ನು ಅದ್ಯತೆಯ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪಾಲಿಕೆ ಇಂಜಿನಿಯರ್ ನರೇಶ್ ಶೆಣೈ ತಿಳಿಸಿದರು.














0 comments:
Post a Comment