ಗೂಡಂಗಡಿ ತೆರವು ಕಾರ್ಯಾಚರಣೆಯಲ್ಲೂ ತಾರತಮ್ಯ ನೀತಿ : ಕಾಂಗ್ರೆಸ್ ವಿರುದ್ದ ಶಾಸಕ ಕಾಮತ್ ವಾಗ್ದಾಳಿ - Karavali Times ಗೂಡಂಗಡಿ ತೆರವು ಕಾರ್ಯಾಚರಣೆಯಲ್ಲೂ ತಾರತಮ್ಯ ನೀತಿ : ಕಾಂಗ್ರೆಸ್ ವಿರುದ್ದ ಶಾಸಕ ಕಾಮತ್ ವಾಗ್ದಾಳಿ - Karavali Times

728x90

23 December 2025

ಗೂಡಂಗಡಿ ತೆರವು ಕಾರ್ಯಾಚರಣೆಯಲ್ಲೂ ತಾರತಮ್ಯ ನೀತಿ : ಕಾಂಗ್ರೆಸ್ ವಿರುದ್ದ ಶಾಸಕ ಕಾಮತ್ ವಾಗ್ದಾಳಿ

ಮಂಗಳೂರು, ಡಿಸೆಂಬರ್ 23, 2025 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕದ್ರಿಪಾರ್ಕ್, ಲೇಡಿಹಿಲ್ ಸೇರಿದಂತೆ ಬಹುತೇಕ ಭಾಗದಲ್ಲಿ ಪಾಲಿಕೆಯ ಅಧಿಕಾರಿಗಳು ಗೂಡಂಗಡಿಗಳನ್ನು ತೆರವುಗೊಳಿಸಿದ್ದು ಕಾಂಗ್ರೆಸ್ ನಾಯಕರು ಸೂಚಿಸಿರುವ ಕಡೆಗಳಲ್ಲಿ ಮಾತ್ರ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಕೆಲವರಿಗೆ ಮಾತ್ರ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತೆರವುಗೊಳಿಸಲೇಬೇಕಾದ ಅನಿವಾರ್ಯತೆಯಿದ್ದರೆ ಎಲ್ಲವನ್ನೂ ತೆರವುಗೊಳಿಸಬೇಕು. ಅದು ಬಿಟ್ಟು ದುಡಿದು ತಿನ್ನುವ ಬಡ ವ್ಯಾಪಾರಿಗಳ ಮಧ್ಯೆಯೂ ಯಾಕೆ ಇಂತಹ ತಾರತಮ್ಯ? ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಇಂತಹ ಅನ್ಯಾಯಗಳಿಗೆ ಆಸ್ಪದವಿರಲಿಲ್ಲ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಆಡಳಿತ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಪರಿಸ್ಥಿತಿಯನ್ನು ನೋಡುವಂತಾಗಿದೆ. ಜೈಲ್ ಜಾಮರ್, ಇ-ಖಾತಾ ಸಮಸ್ಯೆಗಳು ಮಿತಿ ಮೀರಿದ್ದು ಸಚಿವರು, ಜಿಲ್ಲಾಡಳಿತ, ಸರ್ಕಾರ ಸೇರಿದಂತೆ ಎಲ್ಲಾ ಪ್ರಯತ್ನದ ಹೊರತಾಗಿಯೂ ದಪ್ಪ ಚರ್ಮದ ರಾಜ್ಯ ಸರ್ಕಾರ ಜನರ ಬವಣೆಗೆ ಅಂತ್ಯ ಹಾಡದಿರುವುದು ದುರಂತ ಎಂದರು.

ಪಾಲಿಕೆಯ ಫ್ಲೆಕ್ಸ್ ನಿಯಮಗಳು ಕೇವಲ ದೇವಸ್ಥಾನ, ದೈವಸ್ಥಾನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯವಾಗುತ್ತಿದ್ದು ಕಾಂಗ್ರೆಸ್ಸಿನ ಯಾವುದೇ ಕಾರ್ಯಕ್ರಮಗಳಿಗೆ ಅನ್ವಯವಾಗುತ್ತಿಲ್ಲ. ಕಾಂಗ್ರೆಸ್ಸಿಗರು ದೇವರಿಗಿಂತ ದೊಡ್ಡವರಾ? ಪಾಲಿಕೆಯವರು ಆಳುವ ಪಕ್ಷದ ಕೈಗೊಂಬೆಯಂತೆ ವರ್ತಿಸುವುದು ಬಿಟ್ಟು, ನಗರದ ಬೀದಿಗಳಲ್ಲಿ ಬಿದ್ದಿರುವ ಕಸದ ರಾಶಿ ಸಹಿತ ಕಟ್ಟಡ ಸಾಮಾಗ್ರಿಗಳ ಅವಶೇಷಗಳನ್ನು ತೆರವುಗೊಳಿಸಲಿ. ಅನೇಕ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೊಂಡಗಳಿಂದ ಕೂಡಿದ ರಸ್ತೆಗಳು ನಿರ್ಮಾಣವಾಗಿವೆ. ಜನರ ವಿರೋಧದ ಮಧ್ಯೆಯೂ ಕದ್ರಿ ಪಾರ್ಕ್ ನಲ್ಲಿ ಪಾರ್ಕಿಂಗ್ ಶುಲ್ಕ ಆರಂಭಿಸಲಾಗಿದೆ. ಮೊದಲು ಇದನ್ನು ಸರಿಪಡಿಸುವ ಬಗ್ಗೆ ಗಮನ ಹರಿಸಲಿ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರಮುಖರಾದ ಭಾಸ್ಕರ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಗೂಡಂಗಡಿ ತೆರವು ಕಾರ್ಯಾಚರಣೆಯಲ್ಲೂ ತಾರತಮ್ಯ ನೀತಿ : ಕಾಂಗ್ರೆಸ್ ವಿರುದ್ದ ಶಾಸಕ ಕಾಮತ್ ವಾಗ್ದಾಳಿ Rating: 5 Reviewed By: karavali Times
Scroll to Top