ಮಂಗಳೂರು, ಡಿಸೆಂಬರ್ 17, 2025 (ಕರಾವಳಿ ಟೈಮ್ಸ್) : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ವರ್ಷಾಚರಣೆ ಮಾಡುವ ಹೋಟೆಲುಗಳು, ರೆಸ್ಟೋರೆಂಟುಗಳು, ಕ್ಲಬ್ಬುಗಳು, ರೆಸಾರ್ಟುಗಳು ಹಾಗೂ ಇತರ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಲು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ಡಿಸೆಂಬರ್ 23ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳತಕ್ಕದ್ದು. ಪೂರ್ವಾನುಮತಿ ಪಡೆಯದೆ ಹೊಸ ವರ್ಷಾಚರಣೆಗೆ ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 12:30 ರೊಳಗೆ ಮುಕ್ತಾಯಗೊಳ್ಳಬೇಕು. ಈ ಸಮಯದ ಬಳಿಕ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಇರುವುದಿಲ್ಲ. ಧ್ವನಿವರ್ಧಕ ವ್ಯವಸ್ಥೆಗಳು, ಲೌಡ್ ಸ್ಪೀಕರ್ ಬಳಸಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಶಬ್ದ ಮಟ್ಟ ಹೊಂದಿರಬೇಕು. ಡಿಜೆ ಬಳಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಲ್ಲಿ ಯಾವುದೇ ಕಾನೂನು ವಿರೋಧಿ ಮಾದಕ ವಸ್ತುಗಳ ಸಂಗ್ರಹ ಮತ್ತು ಸೇವನೆ ನಿಷೇಧಿಸಲಾಗಿದೆ. ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಆಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನಗಳು, ಜೂಜು ಹಾಗೂ ಇತರ ಅನೈತಿಕ ಚಟುವಟಿಕೆಗಳನ್ನು ನಡೆಸುವುದನ್ನು ಕಟ್ಟು£ಟ್ಟಾಗಿ ನಿಷೇಧಿಸಲಾಗಿದೆ.
ಮದ್ಯ ಮಾರಾಟ ಮತ್ತು ವಿತರಣೆಗೆ ಅಬಕಾರಿ ಇಲಾಖೆಯಿಂದ ಲಿಖಿತ ಅನುಮತಿ ಕಡ್ಡಾಯವಾಗಿದೆ. ಆಯೋಜಕರು ಸಂಬಂಧಿತ ಇಲಾಖೆಯಿಂದ ಪಡೆದ ಲೈಸೆನ್ಸ್ ಮತ್ತು ಅನುಮತಿಯ ಶರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ಉದ್ಯಾನಗಳು, ಆಟದ ಮೈದಾನಗಳು, ರೈಲ್ವೆ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನವನ್ನು ಕಟ್ಟುಣೀಟ್ಟಾಗಿ ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ಕಿಡಿಗೇಡಿತನ ಪ್ರದರ್ಶಿಸಿದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಯೋಜಕರು ಅಗತ್ಯವಿರುವ ಸುರಕ್ಷತಾ ಕ್ರಮಗಳಾದ ಅಗ್ನಿಶಾಮಕ ಸೇವೆ, ವೈದ್ಯಕೀಯ ಸೇವೆಗಳನ್ನು ಮತ್ತು ಇತರ ಭದ್ರತಾ ವ್ಯವಸ್ಥೆಗಳನ್ನು ಸಂಯೋಜಿಸಿಕೊಳ್ಳಬೇಕು.
ಆಯೋಜಕರು ಅನಾಹುತ ತಡೆಗೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕು. ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗದಂತೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮದ್ಯ ವಿತರಣೆಯ ವ್ಯವಸ್ಥೆ ಇದ್ದಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಬೇಕು. ಚುಡಾವಣೆ, ಕಿರುಕುಳ, ಹಿಂಸಾಚಾರ, ಆಶ್ಲೀಲ ಚಟುವಟಿಕೆಗಳ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ನಿಯೋಜಿಸಲಾಗುವುದು. ಮದ್ಯಪಾನ ಮಾಡಿ ವಾಹನ ಚಲಾವಣೆಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು, ನಗರದಾದ್ಯಂತ ಈ ಬಗ್ಗೆ ವಿಶೇಷ ತಪಾಸಣೆ ಇರುತ್ತದೆ. ಹೊಸ ವರ್ಷಾಚರಣೆ ನೆಪದಲ್ಲಿ ಪಟಾಕಿ ಮೊದಲಾದ ಸುಡು ಮದ್ದುಗಳ ಪ್ರದರ್ಶನ ನಿಷೇಧಿಸಲಾಗಿದೆ. ಸಾರ್ವಜನಿಕ ನೆಮ್ಮದಿಗೆ ಭಂಗ ಆಗದ ರೀತಿಯಲ್ಲಿ ಹೊಸ ವರ್ಷಾಚರಣೆ ನಡೆಸುವಂತೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾರ್ಗಸೂಚಿ ಬಿಡುಗಡೆ ಮಾಡುವ ಮೂಲಕ ಕರೆ ನೀಡಿದ್ದಾರೆ.














0 comments:
Post a Comment