ಬಂಟ್ವಾಳ, ಡಿಸೆಂಬರ್ 09, 2025 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ದೇರೊಟ್ಟು ಎಂಬಲ್ಲಿನ ಚಡವು ರಸ್ತೆಯಲ್ಲಿ ಪಿಕಪ್ ವಾಹನ ಹಿಂದಕ್ಕೆ ಚಲಿಸಿದ ಪರಿಣಾಮ ಅದರಡಿಗೆ ಸಿಲುಕಿ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಸಂಭವಿಸಿದೆ.
ಮೃತರನ್ನು ಕರ್ಪೆ ಗ್ರಾಮದ ಗುಲಿಗುಲಿ ನಿವಾಸಿ ಗೋಪಾಲ ಶೆಟ್ಟಿಗಾರ್ ಹಾಗೂ ಸುಂದರ ನಾಯ್ಕ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಗಾಯಾಳು ಸುಂದರ ನಾಯ್ಕ ಅವರ ಸಹೋದರ ದಾಮೋದರ ನಾಯ್ಕ ಅವರು ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮುತ್ತಪ್ಪ ಮೂಲ್ಯ ಎಂಬವರು ಅಜ್ಜಿಬೆಟ್ಟು ಗ್ರಾಮದ ದೇರೊಟ್ಟು ಎಂಬಲ್ಲಿ ಜಾಗ ಮಾರಾಟ ಮಾಡಿ ಪ್ರಸ್ತುತ ಸಿದ್ದಕಟ್ಟೆ ಕೋಡಂಗೆ ಎಂಬಲ್ಲಿ ವಾಸವಾಗಿದ್ದಾರೆ. ಸದ್ರಿ ಹಳೆ ಜಾಗದಲ್ಲಿದ್ದ ಸಾಮಾಗ್ರಿಗಳನ್ನು ಸಾಗಾಟ ಮಾಡಲು ಚಂದ್ರ ಪೂಜಾರಿ ಅವರ ಪಿಕಪ್ ವಾಹನದಲ್ಲಿ ಹೋಗುತ್ತಿದ್ದ ವೇಳೆ ಮುತ್ತಪ್ಪ ಅವರ ಖಾಸಗಿ ಜಮೀನಿನ ಚಡವು ಮಣ್ಣು ರಸ್ತೆಯಲ್ಲಿ ವಾಹನವು ಚಾಲಕನ ನಿಯಂತ್ರಣ ಮೀರಿ ಹಿಂದಕ್ಕೆ ಚಲಿಸಿದ್ದು, ಹಿಂದಿನಿಂದ ನಡೆದುಕೊಂಡು ಹೋಗುತ್ತಿದ್ದ ಗೋಪಾಲ್ ಶೆಟ್ಟಿಗಾರ್ ಮತ್ತು ಮುತ್ತಪ್ಪ ಮೂಲ್ಯ ಅವರುಗಳು ಅಲ್ಲಿಯೇ ಇದ್ದ ಮರದ ತುಂಡನ್ನು ಪಿಕಪ್ ವಾಹನದ ಹಿಂಭಾಗದ ಬಲಭಾಗದ ಚಕ್ರಕ್ಕೆ ಇಡುವಷ್ಟರಲ್ಲಿ ವಾಹನವು ಹಿಂದಕ್ಕೆ ಚಲಿಸಿದಾಗ ವಾಹನದಲ್ಲಿದ್ದ ಸುಂದರ್ ನಾಯ್ಕ ಅವರು ಹಾರಿದ್ದಾರೆ. ಈ ಸಮಯ ಗೋಪಾಲ್ ಶೆಟ್ಟಿಗಾರ್ ಅವರು ಬಲಬದಿಗೆ ಹೋದಾಗ ವಾಹನವು ಬಲಬದಿಗೆ ಅವರ ಮೇಲೆ ಮಗುಚಿ ಬಿದ್ದು ವಾಹನದ ಅಡಿಯಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ಬಂದಿದ್ದಾರೆ. ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.
ಪಿಕಪ್ ವಾಹನದಿಂದ ಹಾರಿದ ಸುಂದರ್ ನಾಯ್ಕ ಅವರ ಬಲಕಾಲಿನ ತೊಡೆಯ ಭಾಗಕ್ಕೆ, ಬಲಭಾಗದ ಅಲ್ಲೆಗೆ ಗಾಯಗಳಾಗಿದೆ. ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment