ಬಂಟ್ವಾಳ, ಡಿಸೆಂಬರ್ 29, 2025 (ಕರಾವಳಿ ಟೈಮ್ಸ್) : ನ್ಯಾನೋ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಪೂಂಜಾಲಕಟ್ಟೆ ಸಮೀಪದ ಕಟ್ಟೆಮನೆ ಎಂಬಲ್ಲಿ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಕುಕ್ಕಾಜೆ ನಿವಾಸಿ ಇಮ್ರಾನ್ ಯಾನೆ ಎಸ್ ಎ ಮೊಹಮ್ಮದ್ ತಾಹಾ ಎಂದು ಹೆಸರಿಸಲಾಗಿದೆ. ಆರೋಪಿ ಕಾರು ಚಾಲಕ ದಕ್ಷಿಣ ಕನ್ನಡ ಜಿಲ್ಲಾ ಡಿ ಸಿ ಆರ್ ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸನ್ನ ಎಂಬವರು ಚಲಾಯಿಸುತ್ತಿದ್ದ ನ್ಯಾನೋ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿರುವ ಇಮ್ರಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಆರೋಪಿ ಚಾಲಕ ದಕ್ಷಿಣ ಕನ್ನಡ ಜಿಲ್ಲಾ ಡಿ.ಸಿ.ಆರ್.ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರು ಚಾಲನೆಯ ವೇಳೆ ಆರೋಪಿಯು ಮದ್ಯಪಾನ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರವಾದ ಹಿನ್ನಲೆಯಲ್ಲಿ ಈ ಬಗ್ಗೆ ಖಚಿತತೆಗಾಗಿ ಪೂಂಜಾಲಕಟ್ಟೆ ಠಾಣಾ ಪಿಎಸ್ಸೈ ಅವರು ಆರೋಪಿ ಮದ್ಯಪಾನ ಮಾಡಿರುವ ಬಗ್ಗೆ ಪರಿಶೀಲಿಸಲು ಆಲ್ಕೋ ಮೀಟರ್ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಆತ ಮದ್ಯಪಾನ ಮಾಡಿರುವುದು ದೃಢಪಟ್ಟಿರುವುದಿಲ್ಲ. ಮೃತ ವ್ಯಕ್ತಿಯ ಸಂಬಂಧಿಕರು ಹಾಗೂ ಸದ್ರಿ ಘಟನೆಯ ಬಗ್ಗೆ ವಿಡಿಯೋ/ ಆಡಿಯೋ ಪ್ರಸಾರ ಮಾಡಿದ ಮಹಿಳೆಯ ಸಮ್ಮುಖದಲ್ಲೂ ಆರೋಪಿಯ ಅಲ್ಕೋ ಮೀಟರ್ ಪರೀಕ್ಷೆ ನಡೆಸಲಾಗಿದ್ದು, ಮದ್ಯಪಾನ ಮಾಡಿರುವುದು ದೃಢಪಟ್ಟಿರುವುದಿಲ್ಲ. ಆರೋಪಿಯು ಮದ್ಯಪಾನ ಮಾಡಿರುವ ಬಗ್ಗೆ ಹೆಚ್ಚಿನ ಖಚಿತತೆಗಾಗಿ ಆರೋಪಿಯ ರಕ್ತ ಪರೀಕ್ಷೆಯನ್ನೂ ನಡೆಸಲಾಗುವುದು ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






















0 comments:
Post a Comment