ಬಂಟ್ವಾಳ, ಡಿಸೆಂಬರ್ 01, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಬಿ ಸಿ ರೋಡು ಅಜ್ಜಿಬೆಟ್ಟು ಕ್ರಾಸ್ ಬಳಿ ಪಾದಚಾರಿ ಮಹಿಳೆಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಹಿತ ಸ್ಕೂಟರ್ ಸವಾರರು ಗಾಯಗೊಂಡ ಘಟನೆ ನ 29 ರಂದು ಸಂಭವಿಸಿದೆ.
ಗಾಯಗೊಂಡ ಪಾದಚಾರಿ ಮಹಿಳೆಯನ್ನು ಸಂಚಯಗಿರಿ ನಿವಾಸಿ ಹರೀಶ್ ಕುಮಾರ್ ಎಂಬವರ ಪತ್ನಿ ದೇಸು ದೇವಿ (36) ಹಾಗೂ ಸ್ಕೂಟರ್ ಸವಾರ ಸಫೀಕ್ ಅನ್ಸಾರಿ, ಸಹಸವಾರ ಕೃಷ್ಣ ಕುಮಾರ್ ಎಂದು ಹೆಸರಿಸಲಾಗಿದೆ. ದೇಸುದೇವಿ ಅವರು ನ 29 ರಂದು ಬೆಳಿಗ್ಗೆ 9 ಗಂಟೆ ವೇಳೆಗೆ ಬಿ ಸಿ ರೋಡಿನ ಬೆಸ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಹೋಗಿ ವಾಪಾಸು ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಅಜ್ಜಿಬೆಟ್ಟು ಕ್ರಾಸ್ ಬಳಿ ಕೈಕಂಬ ಕಡೆಯಿಂದ ಬಿ ಸಿ ರೋಡು ಕಡೆಗೆ ಬರುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ದೇಸು ದೇವಿ ರಸ್ತೆಗೆ ಬಿದ್ದು ಹಣೆ, ಭುಜ ಹಾಗೂ ಕಿವಿಗೆ ಗಾಯಗಳಾಗಿವೆ. ಸ್ಕೂಟರ್ ಸವಾರರು ಕೂಡಾ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment