ದೇಶದ ಅತ್ಯಂತ ಹಿರಿಯ ಶಾಸಕ ಹೆಗ್ಗಳಿಕೆಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ : ದಾವಣಗೆರೆಯಲ್ಲಿ ಡಿ 15 ರಂದು ಶಾಲೆಗಳಿಗೆ ರಜೆ, ವಿವಿ ಪರೀಕ್ಷೆಗಳು ಮುಂದೂಡಿಕೆ - Karavali Times ದೇಶದ ಅತ್ಯಂತ ಹಿರಿಯ ಶಾಸಕ ಹೆಗ್ಗಳಿಕೆಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ : ದಾವಣಗೆರೆಯಲ್ಲಿ ಡಿ 15 ರಂದು ಶಾಲೆಗಳಿಗೆ ರಜೆ, ವಿವಿ ಪರೀಕ್ಷೆಗಳು ಮುಂದೂಡಿಕೆ - Karavali Times

728x90

14 December 2025

ದೇಶದ ಅತ್ಯಂತ ಹಿರಿಯ ಶಾಸಕ ಹೆಗ್ಗಳಿಕೆಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ : ದಾವಣಗೆರೆಯಲ್ಲಿ ಡಿ 15 ರಂದು ಶಾಲೆಗಳಿಗೆ ರಜೆ, ವಿವಿ ಪರೀಕ್ಷೆಗಳು ಮುಂದೂಡಿಕೆ

ದಾವಣಗೆರೆ, ಡಿಸೆಂಬರ್ 15, 2025 (ಕರಾವಳಿ ಟೈಮ್ಸ್) : ಹಿರಿಯ ಕಾಂಗ್ರೆಸ್ ಶಾಸಕ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (94) ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ. 

ತೀವ್ರ ಅನಾರೋಗ್ಯಕ್ಕೀಡಾಗಿದ್ದ ಇವರಿಗೆ ಕಳೆದೊಂದು ತಿಂಗಳಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 94 ವರ್ಷದ ಶಾಮನೂರು ಶಿವಶಂಕರಪ್ಪ ಅವರು ದೇಶದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಆಸ್ಪತ್ರೆ ಭೇಟಿ ನೀಡಿ ಶಿವಶಂಕರಪ್ಪ ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದ್ದರು. ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯ ಸುಧಾರಣೆಯಾಗಲಿ ಎಂದು ದಾವಣಗೆರೆಯಲ್ಲಿ ಅಭಿಮಾನಿಳಿಂದ ಪ್ರಾರ್ಥನೆ ನೆರವೇರಿತ್ತು. ಆದರೆ ಅವರ ಆರೋಗ್ಯ ಸುಧಾರಣೆ ಕಾಣದೆ ಭಾನುವಾರ ಮೃತಪಟ್ಟಿದ್ದಾರೆ. 

ಶಾಮನೂರ್ ಶಿವಶಂಕರಪ್ಪ ಅವರು 1931 ಜೂನ್ 16 ರಂದು ಶಾಮನೂರು ಕಲ್ಲಪ್ಪ-ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಮೃತರು ಪತ್ನಿ ಪಾರ್ವತಮ್ಮ, ನಾಲ್ವರು ಪುತ್ರಿಯರಾದ ಡಾ. ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಡಾ ಮೀನಾ ಶರಣ್ ಪಾಟೀಲ್ ಹಾಗೂ ಮೂವರು ಗಂಡು ಮಕ್ಕಳಾದ ಎಸ್.ಎಸ್ ಬಕ್ಕೇಶ್, ಎಸ್.ಎಸ್ ಗಣೇಶ್, ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಶಾಮನೂರು ಶಿವಶಂಕರಪ್ಪನವರು 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. 1971 ರಿಂದ 1973ರ ವರೆಗೆ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಲೋಕಸಭಾ ಚುನಾವಣೆಗೆ ಅರಸು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇಂದಿರಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಟಿ.ವಿ ಚಂದ್ರಶೇಖರಪ್ಪರ ವಿರುದ್ಧ ಪರಾಭವಗೊಂಡರು. ಇದಾದ ಬಳಿಕ 1994ರಲ್ಲಿ ನಡೆದ 10ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಖಾಡಕ್ಕಿಳಿದ ಅವರು ಬಿಜೆಪಿ ಅಭ್ಯರ್ಥಿ ಕೆ.ಬಿ ಶಂಕರನಾರಾಯಣರನ್ನ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1997ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಜಿ. ಮಲ್ಲಿಕಾರ್ಜುನಪ್ಪ ಅವರನ್ನ ಸೋಲಿಸಿ ಸಂಸದರಾದರು. 2004ರಲ್ಲಿ ಶಿವಶಂಕರಪ್ಪ 2ನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಬಳಿಕ 2008ರಲ್ಲಿ 3ನೇ ಬಾರಿಗೆ. 2013ರಲ್ಲಿ 4ನೇ ಬಾರಿಗೆ, 2018ರಲ್ಲಿ 5ನೇ ಬಾರಿಗೆ ಹಾಗೂ 2023ರಲ್ಲಿ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಎರಡೂವರೆ ವರ್ಷ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವರಾಗಿದ್ದು ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿದ್ದಾರೆ. 

ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಡಿಸೆಂಬರ್ 15 ರಂದು ದಾವಣಗೆರೆ ನಗರ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಆದೇಶಿಸಿದ್ದಾರೆ. ಡಿ 15 ರಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳೂ ಮುಂದೂಡಿಕೆಯಾಗಿದೆ. ಸೋಮವಾರ ನಡೆಯಲಿರುವ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿರುವುದಾಗಿ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಸಿ.ಕೆ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಮುಂದೂಡಿಕೆಯಾದ ಪರೀಕ್ಷಾ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದವರು ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದೇಶದ ಅತ್ಯಂತ ಹಿರಿಯ ಶಾಸಕ ಹೆಗ್ಗಳಿಕೆಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ : ದಾವಣಗೆರೆಯಲ್ಲಿ ಡಿ 15 ರಂದು ಶಾಲೆಗಳಿಗೆ ರಜೆ, ವಿವಿ ಪರೀಕ್ಷೆಗಳು ಮುಂದೂಡಿಕೆ Rating: 5 Reviewed By: karavali Times
Scroll to Top