ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ
ಬಂಟ್ವಾಳ, ಡಿಸೆಂಬರ್ 11, 2025 (ಕರಾವಳಿ ಟೈಮ್ಸ್) : ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸ್ವಚ್ಛತಾ ಆಂದೋಲನ ಎಂಬ ಕಾರ್ಯಕ್ರಮವನ್ನೂ ಹಮ್ಮಿಕೊಂಡು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಇಂದಿನ ದಿನಗಳಲ್ಲಿ ಹೆಚ್ಚು ಪೂರಕ ಎಂದು ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅಭಿಪ್ರಾಯಪಟ್ಟರು.
ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಸ್ವಚ್ಛತಾ ಆಂದೋಲನದ ಮೂಲಕ ವಿದ್ಯಾರ್ಥಿ ಹಂತದಲ್ಲೇ ಮಕ್ಕಳಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಪರಿಜ್ಞಾನ ಮೂಡಿಸಿದರೆ ಅದು ಸಮಾಜದಲ್ಲಿ ಹೆಚ್ಚು ಫಲಿತಾಂಶ ನೀಡಬಲ್ಲುದು ಎಂದರು.
ವಿದ್ಯಾರ್ಥಿ ಬದುಕಿನಲ್ಲಿ ಹೈಸ್ಕೂಲ್ ಹಂತ ಎಂಬುದು ಜೀವನದ ಮಹತ್ವಪೂರ್ಣ ಘಟ್ಟವಾಗಿದೆ. ಈ ಹಂತದಲ್ಲಿ ಶಾಲಾ ಶಿಕ್ಷಕರು-ಪೋಷಕರು ಕಲಿಸಿಕೊಟ್ಟ ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೆಳೆದರೆ ಜೀವನದ ಎಲ್ಲ ಹಂತಗಳಲ್ಲೂ ಯಶಸ್ಸು ಗಳಿಸಲು ಸಾಧ್ಯವಿದೆ ಎಂದವರು ಹೇಳಿದರು.
ಅತಿಥಿಯಾಗಿದ್ದ ಪಾಣೆಮಂಗಳೂರು ವೀರವಿಠಲ ವೆಂಕಟ್ರಮಣ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್ ಪ್ರಮೋದ್ ಭಟ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಕರೇ ದಿಕ್ಸೂಚಿ. ತಪ್ಪಿದಾಗ ತಿದ್ದುವ, ಸಾಧನೆ ಮಾಡಿದಾಗ ಬೆನ್ನು ತಟ್ಟುವ ಶಿಕ್ಷಕ ವೃಂದವೇ ವಿದ್ಯಾರ್ಥಿಯ ಮೊದಲ ಪ್ರೇರಕ ಶಕ್ತಿ ಎಂದರಲ್ಲದೆ ತಾವು ಕಲಿಯುತ್ತಿರುವ ಶಾಲೆಗೆ 100 ಶೇಕಡಾ ಫಲಿತಾಂಶ ತಂದುಕೊಡುವ ಮೂಲಕ ವಿದ್ಯಾರ್ಥಿಗಳು ಸಂಸ್ಥೆಯ ಮೊದಲ ಋಣ ತೀರಿಸುವಂತಾಗಬೇಕು ಎಂದರು.
ಪಾಣೆಮಂಗಳೂರು ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎನ್ ನರೇಂದ್ರನಾಥ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ವೀಣಾ ಕೆ, ಶಾಲಾ ವಿದ್ಯಾರ್ಥಿ ನಾಯಕ ವಿಕಾಸ್, ಎಸ್ ಎಲ್ ಎನ್ ಪಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್ ವೇದಿಕೆಯಲ್ಲಿದ್ದರು.
ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಭೋಜ, ನಿವೃತ್ತ ಅಧ್ಯಾಪಕರಾದ ಉಮಾ ಕಿಶೋರಿ, ಸುಧಾ ನಾಗೇಶ್, ವೆಂಕಟ್ರಾಯ ಕಾಮತ್, ಪರಮೇಶ್ವರ ಜಿ ಹೆಗಡೆ, ನಂದಾವರ ಸರಕಾರಿ ಪ್ರೌಢಾಲಾ ಮುಖ್ಯ ಶಿಕ್ಷಕ ರವಿಕುಮಾರ್, ಪಾಣೆಮಂಗಳೂರು ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿನೋದ್ ಭಟ್, ಶಿಕ್ಷಕರಾದ ಕೇಶವ, ರಾಜೇಂದ್ರ, ಶಾಲಾ ಶಿಕ್ಷಕಿ ಸುಮಿತ್ರಾ, ಕಚೇರಿ ಸಹಾಯಕರಾದ ದಾಮೋದರ, ಸಂತೋಷ್, ಜೆನಿತಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಪುರಸಭಾಧ್ಯಕ್ಷ ವಾಸು ಪೂಜಾರಿ ಹಾಗೂ ಪ್ರಮೋದ್ ಭಟ್ ಅವರನ್ನು ಶಾಲಾಡಳಿತ ಮಂಡಳಿ ಹಾಗೂ ಶಿಕ್ಷಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪಠ್ಯ, ಪಠ್ಯೇತರ ಚಟುವಟಿಕೆ, ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಶಾಲಾ ಸಂಚಾಲಕ ಡಾ ಪಿ ವಿಶ್ವನಾಥ ನಾಯಕ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ ಎಸ್ ಶಾಲಾ ವರದಿ ವಾಚಿಸಿದರು. ಶಿಕ್ಷಕಿಯರಾದ ಸ್ವಾತಿ, ತೇಜಸ್ವಿನಿ ಬಹುಮಾನ ಮೊತ್ತ ನೀಡಿದ ದಾನಿಗಳ ಪಟ್ಟಿ ವಾಚಿಸಿ, ಶ್ರೀಲತಾ ಹಾಗೂ ಸುಜಾತ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕ್ರೀಡಾ ಸಾಧಕ ವಿಜೇತರ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ವೀಣಾ ಕೆ ಮತ್ತು ಸುಧಾಕರ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಧನರಾಜ್ ಡಿ ಆರ್ ವಂದಿಸಿ, ವಿದ್ಯಾರ್ಥಿನಿ ಕು ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶಾಲೆಯ ವಿದ್ಯಾರ್ಥಿಗಳಿಂದ ನಡೆದ ತುಳುನಾಡಿನ ವಿಶೇಷ ಜಾನಪದ ಕಲೆ ಹುಲಿವೇಷ ಕುಣಿತ (ಪಿಲಿಗೊಬ್ಬು) ಅತಿಥಿಗಳ ಹಾಗೂ ನೆರೆದಿದ್ದವರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.









































0 comments:
Post a Comment