ಸಿಂಗಲ್ ಸೈಟ್, 9/11 ಅರ್ಜಿಗಳನ್ನು ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸ್ಪೀಕರ್ ಖಾದರ್ ಸೂಚನೆ - Karavali Times ಸಿಂಗಲ್ ಸೈಟ್, 9/11 ಅರ್ಜಿಗಳನ್ನು ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸ್ಪೀಕರ್ ಖಾದರ್ ಸೂಚನೆ - Karavali Times

728x90

2 December 2025

ಸಿಂಗಲ್ ಸೈಟ್, 9/11 ಅರ್ಜಿಗಳನ್ನು ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸ್ಪೀಕರ್ ಖಾದರ್ ಸೂಚನೆ

ಮಂಗಳೂರು, ಡಿಸೆಂಬರ್ 02, 2025 (ಕರಾವಳಿ ಟೈಮ್ಸ್) : ಸಿಂಗಲ್ ಸೈಟ್ ಹಾಗೂ 9/11  ಅರ್ಜಿಗಳನ್ನು   ಅನಗತ್ಯ ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವಂತೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್  ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ 2 ರಂದು ಉಳ್ಳಾಲ ತಾಲೂಕಿನ 9/11 ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, 9/11 ದಾಖಲೆಗಳಿಗೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ದೀರ್ಘ ಕಾಲದಲ್ಲಿ ಇಟ್ಟುಕೊಳ್ಳುತ್ತಿರುವ ಬಗ್ಗೆ ಹಾಗೂ ಕಚೇರಿಯಿಂದ ಕಚೇರಿಗೆ ಇದಕ್ಕಾಗಿ ಅಲೆದಾಡುವ ಬಗ್ಗೆ   ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು. ಏಕ ನಿವೇಶನಕ್ಕೆ ಸಂಪರ್ಕ ರಸ್ತೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇರಬೇಕು. ಸರಕಾರಿ ರಸ್ತೆ ಅಥವಾ ಖಾಸಗಿ ರಸ್ತೆಗಳ ಬಗ್ಗೆ ಸರಿಯಾದ ಮಾಹಿತಿ ನಮೂದಿಸಬೇಕು ಎಂದು ಯು ಟಿ ಖಾದರ್ ಸೂಚಿಸಿದರು.

ಭವಿಷ್ಯದ ಹಿತ ದೃಷ್ಟಿಯಿಂದ ಬಡಾವಣೆಗಳಲ್ಲಿ ಆಟದ ಮೈದಾನ, ಉದ್ಯಾನವನ ಹಾಗೂ ನಾಗರಿಕ ಸೌಲಭ್ಯದ ನಿವೇಶನಗಳು ಅಗತ್ಯವಾಗಿದೆ. ಅವೈಜ್ಞಾನಿಕ ಕಟ್ಟಡ ನಿರ್ಮಾಣದಿಂದ ಇನ್ನಷ್ಟು ಸಮಸ್ಯೆಗಳು ಹೆಚ್ಚುತ್ತಿದೆ. ನಾಗರಿಕರ ಉತ್ತಮ ಜೀವನಕ್ಕಾಗಿ ನಿಯಮಗಳನ್ನು ತರಲಾಗುತ್ತಿದೆ. ಆದರೆ ಇದರ ಅನುಷ್ಠಾನದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ಸಹಿಸುವುದಿಲ್ಲ ಎಂದು ಸ್ಪೀಕರ್ ಖಾದರ್ ಹೇಳಿದರು. 

ನಗರಾಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ದೀಪಾ ಚೋಳನ್ ಅವರು ಮಾತನಾಡಿ, ಏಕ ನಿವೇಶನ ಅರ್ಜಿಗಳಲ್ಲಿ ರಸ್ತೆ ಬಗ್ಗೆ ಅಫಿದಾವಿತ್ ತೆಗೆದುಕೊಂಡು 9/11 ನೀಡುವ ಬಗ್ಗೆ ಶೀಘ್ರದಲ್ಲಿ ಸುತ್ತೋಲೆ ಹೊರಡಿಸಲಾಗುವುದು. 9/11 ಅರ್ಜಿಗಾಗಿ ಪದೇ ಪದೇ ವಿವಿಧ ಕಚೇರಿಗೆ ತೆರಳುವ ಬದಲು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಒಂದು ಸಲ ಅನುಮೋದನೆ ನೀಡಿದ ಬಳಿಕ ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಗೆ ಕಳುಹಿಸಿಕೊಡಲಾಗುವುದು. ಇದರಿಂದ 2ನೇ ಬಾರಿ ಮುಡಾ ಅಥವಾ ನಗರ ಯೋಜನಾ ಸಮಿತಿಗಳಿಗೆ ಬರುವ ಅಗತ್ಯವಿರುವುದಿಲ್ಲ ಎಂದರು. 

ರಸ್ತೆ ಅಗಲೀಕರಣ ಉದ್ದೇಶವಿದ್ದರೆ ಅದನ್ನು 9/11 ನಲ್ಲಿ ನಮೂದಿಸಲಾಗುವುದು. ಗುಡ್ಡಗಾಡು ಪ್ರದೇಶದಲ್ಲಿ  3.65 ಮೀ. ಅಗಲದ ರಸ್ತೆ ಅವಕಾಶವಿದ್ದು, ಇದನ್ನು ಕರಾವಳಿ ಮತ್ತು ಮಲೆನಾಡಿಗೆ ಅನ್ವಯಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದವರು ತಿಳಿಸಿದರು. ಇನ್ನು ಮುಂದೆ ಪ್ರತಿ ತಿಂಗಳು ತಾಲೂಕೊಂದರಲ್ಲಿ ಅದಾಲತ್ ನಡೆಸಿ ಏಕ ನಿವೇಶನ ಮತ್ತು 9/11 ಸಾರ್ವಜನಿಕ ಅರ್ಜಿಯನ್ನು ಇತ್ಯರ್ಥ ಪಡಿಸಲಾಗುವುದು ಎಂದರು. 

9/11 ನಿಯಮಗಳಲ್ಲಿ ಗೊಂದಲ ತಪ್ಪಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಲಾಗುವುದು. ಸ್ಥಳೀಯ ಮಟ್ಟದ ಅಧಿಕಾರಿಗಳು ತ್ವರಿತವಾಗಿ 9/11 ಹಾಗೂ ಏಕನಿವೇಶನ ಅನುಮೋದನೆ ನೀಡಲು  ಒಂದು ವಾರದಲ್ಲಿ  ಸುತ್ತೋಲೆ ಹೊರಡಿಸಲಾಗುವುದು ಎಂದು ದೀಪಾ ಚೋಳನ್ ಹೇಳಿದರು. 

ಸ್ಥಳೀಯ ಅಧಿಕಾರಿಗಳಿಗೆ 9/11 ನಿಯಮಗಳ ಅರ್ಥೈಸುವಿಕೆಯಲ್ಲಿ ಉಂಟಾದ ಗೊಂದಲದಿಂದ ಸಾರ್ವಜನಿಕರಿಗೆ  ಸಮಸ್ಯೆಯಾಗುತ್ತಿರುವುದು ಕಂಡು ಬಂದಿದೆ ಎಂದರು. 94ಸಿ ಅಡಿ ಮಂಜೂರಾದ ನಿವೇಶನಗಳಲ್ಲಿ ಮನೆ ಕಟ್ಟಲು 9/11 ದಾಖಲೆಗಳನ್ನು 15 ದಿನದೊಳಗೆ ನೀಡಲು ಆನ್ ಲೈನಿನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಾಗರಿಕರು ನೇರವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದವರು ತಿಳಿಸಿದರು.

ಸಭೆಯಲ್ಲಿ ನಗರ ಯೋಜನಾ ಆಯುಕ್ತ ವೆಂಕಟಾಚಲ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸಿಂಗಲ್ ಸೈಟ್, 9/11 ಅರ್ಜಿಗಳನ್ನು ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸ್ಪೀಕರ್ ಖಾದರ್ ಸೂಚನೆ Rating: 5 Reviewed By: karavali Times
Scroll to Top