ಪುತ್ತೂರು, ಡಿಸೆಂಬರ್ 27, 2025 (ಕರಾವಳಿ ಟೈಮ್ಸ್) : ದೇವಸ್ಥಾನದಲ್ಲಿ ಊಟ ಮಾಡಿ ಕೈ ತೊಳೆಯುತ್ತಿದ್ದ ವೇಳೆ ಮಹಿಳೆಯ ಚಿನ್ನದ ಸರ ಎಗರಿಸಿದ ತಮಿಳುನಾಡು ಮೂಲದ ಚಾಲಾಕಿ ಮಹಿಳಾ ಕಳ್ಳಿಯರಿಬ್ಬರನ್ನು ಪುತ್ತೂರು ನಗರ ಪೊಲೀಸರು ಡಿ 26 ರಂದು ಬಂಧಿಸಿದ್ದಾರೆ.
ಬಂಧಿತ ಕಳ್ಳಿಯರನ್ನು ತಮಿಳುನಾಡು ಮೂಲದ ಮಾರಿ (40) ಹಾಗೂ ಶೀತಲ್ ಯಾನೆ ಪ್ರಿಯ (25) ಎಂದು ಹೆಸರಿಸಲಾಗಿದೆ. ಪುತ್ತೂರು-ಕೆಮ್ಮಿಂಜೆ ನಿವಾಸಿ ಶ್ರೀಮತಿ ಯಮುನಾ (67) ಎಂಬವರು ಡಿ 26 ರಂದು ಬೆಳಿಗ್ಗೆ ಕೆಮ್ಮಿಂಜೆ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಅವರು ಊಟ ಮಾಡಿ ಕೈತೊಳೆಯುತ್ತಿದ್ದ ವೇಳೆ ಅವರಿಗೆ ಮುಖ ಪರಿಚಯವಿಲ್ಲದ ಮೂರು ಜನ ಅಪರಿಚಿತ ಮಹಿಳೆಯರು ಜೊತೆಯಲ್ಲೇ ಕೈ ತೊಳೆಯಲು ಬಂದಿದ್ದು, ಈ ಸಂದರ್ಭ ಯಮುನಾ ಅವರಿಗೆ ಅರಿವಿಲ್ಲದಂತೆ ಅವರು ಧರಿಸಿದ್ದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ 14 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಯಮುನಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪುತ್ತೂರು ಪೊಲೀಸರು ಅದೇ ದಿನ ರಾತ್ರಿ ಇಬ್ಬರು ಮಹಿಳಾ ಕಳ್ಳಿಯರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


















0 comments:
Post a Comment