ಮಂಗಳೂರು, ಡಿಸೆಂಬರ್ 27, 2025 (ಕರಾವಳಿ ಟೈಮ್ಸ್) : ಬೈಕಿನಲ್ಲಿ ಅಕ್ರಮ ಗೋಸಾಗಾಟ ಹಾಗೂ ಈ ಸಂದರ್ಭ ನಡೆದ ಅನೈತಿಕ ಗೂಂಡಾಗಿರಿ ಪ್ರಕರಣ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲಾಲಿ-ನಾರ್ಲಪದವು ಎಂಬಲ್ಲಿ ಡಿ 27 ರಂದು ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಘಟನೆ ನಂತರ ಎರಡೂ ಕಡೆಯಿಂದ ಕೆಲವೊಂದು ಊಹಾಪೋಹ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಪ್ರಕರಣವನ್ನು ಖುದ್ದು ಕೈಗೆತ್ತಿಕೊಂಡು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ಈ ಬಗ್ಗೆ ಕೂಲಂಕುಷ ತನಿಖೆ ಕೈಗೊಂಡು ಸತ್ಯಾಸತ್ಯತೆಯನ್ನು ಒಂದೊಂದಾಗಿ ಬಯಲಿಗೆಳೆಯುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದು ಅಪರಾಧಿಕ ಕೃತ್ಯಕ್ಕೆ ತಕ್ಕ ಪ್ರಕರಣ ದಾಖಲಿಸುವ ಕಾರ್ಯ ಕೈಗೊಂಡಿದ್ದಾರೆ.
ಮೂಲರಪಟ್ಣ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತಮ್ಮ 11 ವರ್ಷದ ಮಗಳೊಂದಿಗೆ ಯಾವುದೆ ದಾಖಲೆಗಳಿಲ್ಲದ ಸುಮಾರು 19 ಕೆಜಿ ತೂಕದ ಗೋಮಾಂಸವನ್ನು ಹೊತ್ತುಕೊಂಡು ಬಜ್ಪೆ ಪೆÇಲೀಸ್ ಠಾಣಾ ವ್ಯಾಪ್ತಿಯ ಮಲಾಲಿ-ನಾರ್ಲಪದವು ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಎಡಪದವು ಮೂಲದ ಇಬ್ಬರು ಆರೋಪಿಗಳಾದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30) ಎಂಬವರು ಟಾಟಾ ಸುಮೋ ವಾಹನದಲ್ಲಿ ಬಂದು ಅವರನ್ನು ಸತ್ತಾರ್ ಅವರ ಬೈಕನ್ನು ತಡೆದಿದ್ದು, ಈ ಸಂದರ್ಭ ಬೈಕ್ ಕೆಳಗೆ ಬಿದ್ದು, ಬೈಕಿನ ಸೈಲೆನ್ಸರ್ ತಾಗಿ ಬಾಲಕಿಯ ಕಾಲಿಗೆ ಸುಟ್ಟ ಗಾಯವಾಗಿದೆ. ಸತ್ತಾರ್ ಬೈಕನ್ನು ಸ್ಥಳದಲ್ಲೇ ಬಿಟ್ಟು ಓಡಿದ್ದು, ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.
ಆರೋಪಿಗಳಾದ ಸುಮಿತ್ ಹಾಗೂ ರಜತ್ ಅವರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರನ್ನೂ ಪ್ರತ್ಯೇಕವಾಗಿ ಪೊಲೀಸರು ವಿಚಾರಿಸಿದ್ದು, ಈ ಸಂದರ್ಭ ರಜತ್ ವೈದ್ಯಕೀಯ ಪ್ರತಿನಿಧಿಯಾಗಿದ್ದು, ಮಹರ್ಷಿ ಚಿಕಿತ್ಸಾಲಯಕ್ಕೆ ಔಷಧಿ ನೀಡಲು ಹೋಗಿದ್ದರು ಎಂದು ಹೇಳಿದ್ದರು. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಸ್ತುತ ಆಸ್ಪತ್ರೆಗೆ ರಜತ್ ಎಂಬವರು ಯಾವುದೆ ಔಷಧಿ ತಲುಪಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಅವರು ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಸಂದರ್ಭ ಪೊಲೀಸರು ದೇವಸ್ಥಾನದ ವಿಳಾಸ ಕೇಳಿದಾಗ ಅವರು ಯಾವ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ ಎಂಬುದೂ ಪೊಲೀಸರಿಗೆ ಸ್ಪಷ್ಟವಾಗಿದೆ.
ಆಸ್ಪತ್ರೆಯಲ್ಲಿರುವ ಬಾಲಕಿಯ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದು, ಆರೋಪಿಗಳು ಬೈಕ್ ತಡೆದು ತಂದೆಗೆ ಕೈಗಳಿಂದ ಹೊಡೆದಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಬಿಲ್ ಇಲ್ಲದೆ ಗೋಮಾಂಸ ಸಾಗಣೆ ಮಾಡಿದ್ದಕ್ಕಾಗಿ ಸತ್ತಾರ್ ವಿರುದ್ದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸುತ್ತಿದ್ದಾರೆ. ನೈತಿಕ ಪೆÇಲೀಸ್ ಗಿರಿ ನಡೆಸಿದ್ದಕ್ಕಾಗಿ ಆರೋಪಿಗಳಾದ ಸುಮಿತ್ ಮತ್ತು ರಜತ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
ಬಳಿಕ ಪೊಲೀಸರು ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸತ್ತಾರ್ ಆ ಪ್ರದೇಶದಲ್ಲಿ ನಿಯಮಿತವಾಗಿ ಗೋಮಾಂಸ ಸಾಗಾಟ ನಡೆಸುತ್ತಿದ್ದರು ಎನ್ನಲಾಗಿದ್ದು, ಶನಿವಾರ 19 ಕೆಜಿ ಮಾಂಸವನ್ನು 35 ಚೀಲಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಸುಮಿತ್ ಮತ್ತು ರಜತ್ ಹೋಗಿ ಅವನ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭ ಬೈಕಿನ ಸೈಲೆನ್ಸರ್ ತಾಗಿ ಅಥವಾ ಬೈಕ್ ಸೈಲೆನ್ಸರ್ ಆಕೆಯ ಕಾಲಿನ ಮೇಲೆ ಬಿದ್ದು ಬಾಲಕಿಯ ಕಾಲಿಗೆ ಸುಟ್ಟ ಗಾಯವಾಗಿದೆ. ಅವರ ಮೇಲೆ ಹಲ್ಲೆ ನಡೆದಿದೆಯೇ ಮತ್ತು ಹೇಗೆ ಹಲ್ಲೆ ನಡೆಸಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವುದೇ ಬಿಲ್ ಗಳಿಲ್ಲದೆ ಅಧಿಕೃತ ಸ್ಥಳದಿಂದ ಅಕ್ರಮವಾಗಿ ಗೋಮಾಂಸ ಸಾಗಿಸುವವರನ್ನು ತಡೆಯುವುದು ಪೆÇಲೀಸರ ಕರ್ತವ್ಯವಾಗಿದೆ. ನೈತಿಕ ಪೆÇಲೀಸ್‍ಗಿರಿ ಮತ್ತು ಗೋಮಾಂಸ ಸಾಗಣೆ ಎರಡಕ್ಕೂ ಪ್ರಕರಣ ದಾಖಲಿಸಲಾಗುವುದು. ಸತ್ತಾರ್ ವಶಕ್ಕೆ ಪಡೆದ ನಂತರ ಆತ ಮಾಂಸವನ್ನು ಎಲ್ಲಿಂದ ತರುತ್ತಿದ್ದ ಎಂಬ ಬಗ್ಗೆ ಗೊತ್ತಾಗಲಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುತ್ತಿರುವ ಅವಿನಾಶ್ ಸುವರ್ಣ ಎಂಬಾತ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಿ ತಿಳಿದುಕೊಳ್ಳಲಾಗುವುದು. ತನಿಖೆಯ ಬಳಿಕ ಆತ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಕಂಡುಬಂದರೆ, ಸಾಮಾಜಿಕ ತಾಣಗಳಲ್ಲಿ ಸಂದೇಶ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ಕೇವಲ ಒಂದು ವಾಹನ ಮಾತ್ರ ಬೈಕನ್ನು ಹಿಂಬಾಲಿಸಲಾಗಿದ್ದು, ಇಬ್ಬರು ವ್ಯಕ್ತಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಕೆಲವರು ಎರಡು ವಾಹನಗಳು ಮತ್ತು 5 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ವದಂತಿಗಳನ್ನು ಹರಡಲು ಪ್ರಯತ್ನಿಸಿದ್ದಾರೆ. ಮತ್ತು ಅವರ ಹೆಸರುಗಳು ಮತ್ತು ಭಾಗಿಯಾಗದವರ ಚಿತ್ರಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಡಿದ್ದಾರೆ. ಇದು ಸೆಕ್ಷನ್ 353 ಬಿ ಎನ್ ಎಸ್ ಪ್ರಕಾರ ಅಪರಾಧವಾಗಿದ್ದು, ಅವರ ವಿರುದ್ದವೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು.
ಅದೇ ರೀತಿ, ಆರೋಪಿ ಕಡೆಯವರು ವಿಳಾಸ ಹುಡುಕಲು ಸಹಾಯ ಕೇಳಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸೀಸಿಟಿವಿ ಫೂಟೇಜಿನಲ್ಲಿ ಬೈಕನ್ನು ನಿಲ್ಲಿಸುವ ಮೊದಲು ಸುಮಾರು 5 ಕಿ ಮೀ ಹಿಂಬಾಲಿಸಿದಂತೆ ಕಂಡು ಬರುತ್ತಿದೆ ಎಂದಿರುವ ಕಮಿಷನರ್ ರೆಡ್ಡಿ ಒಟ್ಟಾರೆ ನಡೆದಿರುವ ಒಂದು ಘಟನೆಯ ಬಳಿಕ ಎರಡೂ ಕಡೆಯವರು ತಮಗೆ ಪೂರಕವಾಗುವ ರೀತಿಯಲ್ಲಿ ಸತ್ಯ ಸಂಗತಿ ತಿರುಚಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದು, ಇದಕ್ಕೆ ಅವಕಾಶ ನೀಡದೆ ಇಡೀ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರೆಲ್ಲರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ರೆಡ್ಡಿ ಎಚ್ಚರಿಸಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸಂಪೂರ್ಣ ವಿವರಗಳನ್ನು ಮಾಧ್ಯಮಗಳಿಗೆ ನೀಡಲಾಗುವುದು ಎಂದು ಸುಧೀರ್ ರೆಡ್ಡಿ ತಿಳಿಸಿದ್ದಾರೆ.




















0 comments:
Post a Comment