ಬಂಟ್ವಾಳ, ಡಿಸೆಂಬರ್ 27, 2025 (ಕರಾವಳಿ ಟೈಮ್ಸ್) : ಕ್ರಷರಿನ ಕೆಟ್ಟು ಹೋಗಿದ್ದ ಲೈಟಿಂಗ್ ಸರಿಪಡಿಸಲು ಶೀಟು ಹಾಕಿದ ಗೋಡೆಗೆ ಏಣಿ ಇಟ್ಟು ಮೇಲೇರಿ ಬಳಿಕ ಕೆಳಗೆ ಇಳಿಯುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಅನಂತಾಡಿ ಗ್ರಾಮದ ತುಂಬೆಕೋಡಿಯ ಆರ್ ಬಿ ಕ್ರಷರ್ ಎಂಬಲ್ಲಿ ಡಿ 25 ರಂದು ಸಂಭವಿಸಿದೆ.
ಮೃತ ಕಾರ್ಮಿಕನನ್ನು ಮೆಥನ್ ಮಲ್ಲಿಕ್ (22) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೂಲತಃ ಒಡಿಸ್ಸಾ ರಾಜ್ಯದ ನಿವಾಸಿ ಪ್ರಸ್ತುತ ಅನಂತಾಡಿ ಗ್ರಾಮದ ತುಂಬೆಕೋಡಿ ಎಂಬಲ್ಲಿ ಬಾಡಿಗೆ ವಾಸವಾಗಿರುವ ಆಕೇಶ್ ಪ್ರಧಾನ್ (20) ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಡಿ 25 ರಂದು ಸಹಕಾರ್ಮಿಕ ಮೃತ ಮೆಥನ್ ಮಲ್ಲಿಕ್ ಎಂಬಾತ ತುಂಬೆಕೋಡಿಯ ಆರ್ ಬಿ ಕ್ರಷರ್ ಲೈಟಿಂಗ್ ಕೆಟ್ಟು ಹೋಗಿರುವುದನ್ನು ಸರಿಪಡಿಸುವ ಉದ್ದೇಶದಿಂದ ಕ್ರಷರಿನ ಶೀಟು ಹಾಕಿದ ಗೋಡೆಗೆ ಏಣಿ ಇಟ್ಟು ರಿಪೇರಿ ಮಾಡಿ ಕೆಳಗೆ ಇಳಿಯುವ ಸಮಯ ಮದ್ಯಾಹ್ನ 12 ಗಂಟೆಗೆ ಏಣಿಗೆ ಇಟ್ಟ ಆತನ ಕಾಲು ಆಕಸ್ಮಿಕವಾಗಿ ಜಾರಿ ಏಣಿಯೊಂದಿಗೆ ಸುಮಾರು 10 ಅಡಿ ಎತ್ತರದಿಂದ ಕೆಳಗೆ ಕಟ್ಟಿದ ಕೆಂಪುಕಲ್ಲಿನ ಗೋಡೆಯ ಮೇಲೆ ಬಿದ್ದಿದ್ದಾರೆ. ಘಟನೆಯಿಂದ ಆತನ ಎದೆಗೆ, ಸೊಂಟಕ್ಕೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆತನನ್ನು ಮಂಗಳೂರಿನ ಎ ಜೆ ಅಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ರಾತ್ರಿ 11.46 ರ ವೇಳೆಗೆ ಆತನ ಮೃತಪಟ್ಟಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಅರ್ ಪ್ರಕರಣ ದಾಖಲಾಗಿದೆ.


















0 comments:
Post a Comment