ಪುತ್ತೂರು, ಡಿಸೆಂಬರ್ 02, 2025 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟದ ವೇಳೆ ವಾಹನ ಕೆಟ್ಟು ಹೋಗಿದ್ದರಿಂದ ಆರೋಪಿಗಳು ಜಾನುವಾರುಗಳನ್ನು ರಸ್ತೆಯಲ್ಲೇ ಬಿಟ್ಟು ವಾಹನದೊಂದಿಗೆ ಪರಾರಿಯಾಗಿದ್ದ ಘಟನೆ ಬೇಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ತಾಲೂಕು ಸಜಿಪನಡು ನಿವಾಸಿಗಳಾದ ಆಶಿಕ್ ಪಾಷಾ (26) ಹಾಗೂ ಅಬ್ದುಲ್ ಲತೀಫ್ (25) ಎಂದು ಹೆಸರಿಸಲಾಗಿದೆ. ನ 29 ರಂದು ಬೆಳಿಗ್ಗೆ ಪುತ್ತೂರು ತಾಲೂಕಿನ ನರಿಮಮೊಗರು ಎಂಬಲ್ಲಿ ನಡು ರಸ್ತೆಯಲ್ಲೇ ಜಾನುವಾರುಗಳು ಪತ್ತೆಯಾಗಿತ್ತು. ಇದು ಜಾನುವಾರು ಕಳ್ಳರು ಕದ್ದು ತಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದರು. ಈ ಬಗ್ಗೆ ಪಾಣಾಜೆ ನಿವಾಸಿ ಪ್ರೇಮ್ ರಾಜ್ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿಗಳು ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 4 ಕರುಗಳು ಹಾಗೂ ಒಂದು ದನವನ್ನು ಸಾಗಿಸುವ ವೇಳೆ ವಾಹನ ದುರಸ್ತಿಗೀಡಾಗಿದ್ದರಿಂದ ಜಾನುವಾರುಗಳನ್ನು ರಸ್ತೆಯಲ್ಲೇ ಬಿಟ್ಟು ವಾಹನದೊಂದಿಗೆ ತೆರಳಿರುವುದು ತನಿಖೆ ವೇಳೆ ತಿಳಿದು ಬಂದಿದೆ. ವಾಹನ ಸಹಿತ ಆರೋಪಿಗಳನ್ನು ದಸ್ತಗಿರಿ ಮಾಡಿರುವ ಪುತ್ತೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.















0 comments:
Post a Comment