![]() |
| ಮೊದಲಿದ್ದ ನೋ ಪಾರ್ಕಿಂಗ್ ಬೋರ್ಡ್ ಹಾಗೂ ಬಳಿಕ ಬೋರ್ಡ್ ಕಾಣೆಯಾಗಿ ಕೇವಲ ಕಂಬ ಮಾತ್ರ ಉಳಿದಿರುವುದು |
ಬಂಟ್ವಾಳ, ಜನವರಿ 12, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಪೇಟೆಯ ಗಣೇಶ್ ಮೆಡಿಕಲ್ ಎದುರು ಭಾಗದಲ್ಲಿ ಟ್ರಾಫಿಕ್ ಪೊಲೀಸ್ ಹೆಸರಿನಲ್ಲಿ ನೋ ಪಾರ್ಕಿಂಗ್ ನಾಮಫಲಕವೊಂದು ಕಳೆದ ಕೆಲವು ತಿಂಗಳುಗಳಿಂದ ಅಳವಡಿಸಲಾಗಿತ್ತು. ಆದರೆ ಇಲ್ಲಿ ನೋ ಪಾರ್ಕಿಂಗ್ ಇದ್ದರೂ ಅದಕ್ಕೆ ಬೆಲೆಯೇ ಕಲ್ಪಿಸದ ವಾಹನ ಸವಾರರು ನಾಮಫಲಕದಡಿಯಲ್ಲೇ ವಾಹನಗಳ್ನು ಪಾರ್ಕಿಂಗ್ ಮಾಡುವ ಮೂಲಕ ನಾಮಫಲಕ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನೇ ಅಣಕಿಸುವಂತಿತ್ತು. ವಾಹನ ಸವಾರರು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ತೆರಳುತ್ತಿದ್ದ ಪರಿಣಾಮ ತಾಸುಗಟ್ಟಲೆ ವಾಹನಗಳು ಅಲ್ಲೇ ಬೀಡು ಬಿಡುತ್ತಿದ್ದವು. ಇದು ಹೆದ್ದಾರಿ ಬದಿಯಲ್ಲೇ ಒಂದು ರೀತಿಯ ಅವ್ಯವಸ್ಥೆಗೂ ಕಾರಣವಾಗಿತ್ತು.
ಇಲ್ಲಿನ ನೋ ಪಾರ್ಕಿಂಗ್ ನಾಮಫಲಕದಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆಯ ಹೆಸರು ನಮೂದಿಸಲಾಗಿತ್ತಾದರೂ ಪೊಲೀಸರು ಮಾತ್ರ ನಾಮಫಲಕಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ದಿನವಿಡೀ ಇದೇ ಪರಿಸರದಲ್ಲಿ ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ರಾಜಧನ ಸಂಗ್ರಹಿಸುತ್ತಿದ್ದರೂ ಅಲ್ಲೇ ಇದ್ದ ಪಾರ್ಕಿಂಗ್ ಅವ್ಯವಸ್ಥೆ ಬಗ್ಗೆ ಪೊಲೀಸರು ಯಾವುದೇ ಕ್ರಮವನ್ನೂ ಕೈಗೊಳ್ಳುತ್ತಿರಲಿಲ್ಲ. ಇದರಿಂದ ಇಲ್ಲಿ ಸದಾ ಅನಧಿಕೃತ ಪಾರ್ಕಿಂಗ್ ತಾಣವಾಗಿ ಹೆದ್ದಾರಿ ಬದಿಯಲ್ಲೇ ಅವ್ಯವಸ್ಥೆ ಸೃಷ್ಟಿಯಾಗುತ್ತಿತ್ತು. ಇದು ಇಲ್ಲಿನ ಸಾರ್ವಜನಿಕರ ಪಾಲಿಗೆ ಒಂದು ರೀತಿಯಲ್ಲಿ ಚರ್ಚಾ ವಿಷಯವಾಗಿತ್ತು.
ಇದೀಗ ಕೆಲ ದಿನಗಳ ಹಿಂದೆ ಇಲ್ಲಿ ಅಳವಡಿಸಲಾಗಿದ್ದ ನೋ ಪಾರ್ಕಿಂಗ್ ನಾಮಫಲಕ ಹಠಾತ್ತನೆ ಕಾಣದಂತೆ ಮಾಯವಾಗಿದೆ. ಸದ್ಯ ನಾಮಫಲಕ ಹೊತ್ತ ಕಂಬ ಮಾತ್ರ ಸ್ಥಳದಲ್ಲಿ ಉಳಿದುಕೊಂಡಿದೆ. ಅನಧಿಕೃತ ವಾಹನ ಪಾರ್ಕಿಂಗ್ ನಿಯಂತ್ರಿಸುವ ಬದಲಾಗಿ ನಾಮಫಲಕವನ್ನೇ ತೆರವುಗೊಳಿಸಿರುವ ಕ್ರಮವನ್ನೂ ಸಾರ್ವಜನಿಕರು ವಿಮರ್ಶೆಗೊಳಪಡಿಸುತ್ತಿರುವುದು ಕೇಳಿ ಬರುತ್ತಿದೆ. ಅಂಗಾಂಗ ನೋವಿಗೆ ಔಷಧಿ ಮಾಡಿ ಸರಿಪಡಿಸುವ ಬದಲು ಅಂಗವನ್ನೇ ಕತ್ತರಿಸಿ ತೆಗೆದಂತೆ ಎಂದು ಇಲ್ಲಿನ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುದ್ದಾರೆ.













0 comments:
Post a Comment