ಬಂಟ್ವಾಳ, ಜನವರಿ 15, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಯಾಗಿರುವ ಬಿ ಸಿ ರೋಡು ಪಟ್ಟಣದ ಜಂಕ್ಷನ್ನಿನಲ್ಲಿ ತೆರೆದ ಚರಂಡಿಯಲ್ಲಿರುವ ಕೊಳಚೆ ನೀರು ಪರಿಸರವಿಡೀ ದುರ್ನಾತ ಪಸರಿಸುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಬಗ್ಗೆ ಸಚಿತ್ರ ವರದಿ ಪ್ರಕಟಿಸಿದ ಪತ್ರಿಕಾ ವರದಿಗೆ ಸ್ಪಂದಿಸಿದ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಪರಿಹಾರ ಕ್ರಮಕ್ಕೆ ಕನಿಷ್ಠ ಪ್ರಯತ್ನ ನಡೆಸಿದ್ದಾರೆ.
ದುರ್ನಾತ ಬೀರುತ್ತಿದ್ದ ತೆರೆದ ಚರಂಡಿಗೆ ಬ್ಲೀಚಿಂಗ್ ಪೌಡರ್ ಹಾಗೂ ಫಿನಾಯಿಲ್ ಉಪಯೋಗಿಸಿ ಶುಚೀಕರಣಗೊಳಿಸುವ ಕಾರ್ಯವನ್ನು ಪುರಸಭಾ ಪೌರ ಕಾರ್ಮಿಕರು ಕೈಗೊಂಡಿದ್ದಾರೆ.
ಬಿ ಸಿ ರೋಡಿನ ಎಲ್ ಡಿ ಬ್ಯಾಂಕ್ ಮುಂಭಾಗದ ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ಡಿವೈಎಸ್ಪಿ ಕಚೇರಿಗೆ ಹೋಗುವ ರಸ್ತೆಯ ಬದಿಯಲ್ಲೇ ಈ ಚರಂಡಿ ಕಳೆದ ಹಲವು ದಿನಗಳಿಂದ ಬಾಯಿ ತೆರೆದುಕೊಂಡಿತ್ತು. ಬಾಯಿ ತೆರೆದಿರುವ ಈ ಚರಂಡಿಯ ಒಳಭಾಗದಲ್ಲಿರುವ ಕೊಳಚೆಯುಕ್ತ ನೀರು ಎದ್ದು ಕಾಣುವಂತಿತ್ತು. ಅಲ್ಲದೆ ಇದರ ಗಬ್ಬು ವಾಸನೆ ಪರಿಸರವಿಡೀ ಬೀರುತ್ತಿದ್ದು, ಸಾರ್ವಜನಿಕರು ನಿತ್ಯವೂ ಮೂಗು ಮುಚ್ಚಿ ನಡೆದಾಡಬೇಕಾದ ಸ್ಥಿತಿ ಇಲ್ಲಿತ್ತು. ಈ ಪ್ರದೇಶದಲ್ಲಿ ಬ್ಯಾಂಕುಗಳ ಸಹಿತ ಹಲವು ಅಂಗಡಿಗಳು, ಪೋಲೀಸ್ ಠಾಣೆ, ದೇವಸ್ಥಾನ ಮೊದಲಾದ ವ್ಯವಸ್ಥೆಗಳಿದ್ದು, ನಿತ್ಯವೂ ಈ ಜಾಗದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ಇದೇ ಪ್ರದೇಶದಲ್ಲಿ ಹಾದುಹೋಗುತ್ತಿದ್ದು, ಅಲ್ಲದೆ ಸಮೀಪದಲ್ಲೇ ಖಾಸಗಿ ಕಾರು ಪಾರ್ಕಿಂಗ್ ಕೂಡಾ ಇಲ್ಲಿದ್ದು ಈ ಪ್ರದೇಶದಲ್ಲಿ ಒಂದು ನಿಮಿಷವೂ ನಿಂತುಕೊಳ್ಳದ ಪರಿಸ್ಥಿತಿ ಇದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದರ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಪುರಸಭಾಧಿಕಾರಿಗಳ ಗಮನ ಸೆಳೆದಿತ್ತು.
ಪತ್ರಿಕಾ ವರದಿಯ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಅವರು ಪೌರ ಕಾರ್ಮಿಕರ ಮೂಲಕ ತಾತ್ಕಾಲಿಕ ಶುಚೀಕರಣ ಕಾರ್ಯ ಕೈಗೊಂಡಿದ್ದಾರೆ.
ಇಲ್ಲಿನ ಚರಂಡಿಯಿಂದಾಗಿ ದುರ್ನಾತ ಮಾತ್ರವಲ್ಲದೆ ಬಾಯಿ ತೆರೆದ ಈ ಚರಂಡಿ ಸಾರ್ವಜನಿಕರ ಪಾಲಿಗೆ ಅಪಾಯವನ್ನೂ ಆಹ್ವಾನಿಸುವಂತಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.













0 comments:
Post a Comment