ಮಂಗಳೂರು, ಜನವರಿ 12, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರದ ಹಲವು ಮಂದಿ ಪೆಡ್ಲರುಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಬೃಹತ್ ಮೂಲವೊಂದನ್ನು ಬೇಧಿಸಿದ ಮಂಗಳೂರು ಪೊಲೀಸರು ಉಗಾಂಡ ಮೂಲದ ಮಹಿಳೆಯೋರ್ವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಮಹಿಳೆಯನ್ನು ಜಾಲಿಯಾ ಝಲ್ವಾನ್ ಗೋ ಉಗಾಂಡ ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಯಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜಾಲದಲ್ಲಿ ಸಕ್ರಿಯರಾಗಿದ್ದ ಆರು ಮಂದಿಯನ್ನು ಈ ಹಿಂದೆಯೇ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಜಾಲದಲ್ಲಿ ಈಗಾಗಲೇ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಂದಾಪುರ-ನಾವುಂದ ನಿವಾಸಿ ಮೊಹಮ್ಮದ್ ಶಿಯಾಬ್ ಅಲಿಯಾಸ್ ಶಿಯಾಬ್ (22), ಉಳ್ಳಾಲ ತಾಲೂಕು-ನರಿಂಗಾನ ನಿವಾಸಿ ಮೊಹಮ್ಮದ್ ನೌಷದ್ ಅಲಿಯಾಸ್ ನೌಷದ್ (29), ಬೆಂಗ್ರೆ ನಿವಾಸಿ ಇಮ್ರಾನ್ ಅಲಿಯಾಸ್ ಇಂಬ (27), ಬ್ರಹ್ಮರಕೂಟ್ಲು ನಿವಾಸಿ ನಿಸಾರ್ ಅಹಮ್ಮದ್ (36) ಎಂಬವರನ್ನು ಬಂಧಿಸಿ 524 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲೆ, ಕಾಪು ತಾಲೂಕು, ಮಜೂರು-ಮಲ್ಲಾರ್ ನಿವಾಸಿ ಮೊಹಮ್ಮದ್ ಇಕ್ಬಾಲ್ (30), ಪಡುಬಿದ್ರಿ-ಕಂಚಿನಡ್ಕ ನಿವಾಸಿ ಶೆಹರಾಜ್ ಶಾರೂಕ್ (25) ಎಂಬವರನ್ನು ಬಂಧಿಸಿ 200 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.












0 comments:
Post a Comment