ಮಂಗಳೂರು, ಜನವರಿ 17, 2026 (ಕರಾವಳಿ ಟೈಮ್ಸ್) : ಕಾಲೇಜು ವಿದ್ಯಾರ್ಥಿಗಳ ಸಹಿತ ಗಿರಾಕಿಗಳಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಸಾವಿರಾರು ರೂಪಾಯಿ ಮೌಲ್ಯದ ಎಂಡಿಎಂಎ ಸಹಿತ ನಂದಾವರ ಮೂಲದ ಡ್ರಗ್ಸ್ ಪೆಡ್ಲರ್ ಒಬ್ಬನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಅರೋಪಿಯನ್ನು ಬಂಟ್ವಾಳ ತಾಲೂಕು, ಸಜಿಪಮುನ್ನೂರು ಗ್ರಾಮದ ನಂದಾವರ-ಬಸ್ತಿಗುಡ್ಡೆ ನಿವಾಸಿ ಖಾದರ್ ಎಂಬವರ ಪುತ್ರ ಇಂತಿಯಾಝ್ ಅಲಿಯಾಸ್ ಮಹಮ್ಮದ್ ಇಂತಿಯಾಝ್ (40) ಎಂದು ಹೆಸರಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ತಾಲೂಕು ಮುನ್ನೂರು ಗ್ರಾಮದ ರಾಣಿಪುರ ಮೈದಾನದ ಬಳಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯಿಂದ 65 ಸಾವಿರ ರೂಪಾಯಿ ಮೌಲ್ಯದ 13 ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ, 2 ಸಾವಿರ ರೂಪಾಯಿ ನಗದು ಹಣ, ವಿವೋ ಮೊಬೈಲ್, ತೂಕ ಮಾಪನ ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment