ಮಂಗಳೂರು, ಜನವರಿ 15, 2026 (ಕರಾವಳಿ ಟೈಮ್ಸ್) : ಕೆಲವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಅಮಾಯಕರ ವಿರುದ್ದ ಬಾಂಗ್ಲಾ ದೇಶದಿಂದ ಬಂದವರು ಎಂಬ ಕಪೋಲ ಕಲ್ಪಿತ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.
ಅಮಾಯಕರ ವಿರುದ್ದ ಹರಡುತ್ತಿರುವ ಇಂತಹ ಸಂದೇಶಗಳು ಅಮಾಯಕರ ವಿರುದ್ಧ ದಾಳಿಗೆ ಕಾರಣವಾಗಬಹುದು. ಮಂಗಳೂರಿನಲ್ಲಿ ಭಾರತೀಯ ವಲಸೆ ಕಾರ್ಮಿಕನ ಮೇಲೆ ಇಂತಹ ದಾಳಿ ನಡೆದಿರುವುದನ್ನು ಈ ಸಂದರ್ಭ ಗಮನಿಸಬಹುದು. ಈ ಬಗ್ಗೆ ಈಗಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವಾಟ್ಸಪ್ ಗುಂಪಿನಲ್ಲಿ ಬಾಂಗ್ಲಾ ನಿವಾಸಿಗಳೆಂದು ಸಂದೇಶವೊಂದು ಹರಿದಾಡುತ್ತಿದ್ದು, ಈ ಕುಟುಂಬದ ಹಿನ್ನೆಲೆಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಅವರ ಹೆಸರಿನಲ್ಲಿ 2014 ರಲ್ಲಿ ಖರೀದಿಸಲಾದ ಬಗ್ಗೆ ದಾಖಲೆಗಳಿವೆ, ಭಾರತೀಯರಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿರುವ ಕಮಿಷನರ್ ಬಾಂಗ್ಲಾದೇಶದಿಂದ ಬಂದವರೆಂದು ಯಾರ ಬಗ್ಗೆಯಾದರೂ ಸಂಶಯ ಬಂದರೆ ನೇರವಾಗಿ ಪೊಲೀಸರಿಗೆ ದೂರು ನೀಡಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ ಹೌದು ಎಂದು ಕಂಡುಬಂದಲ್ಲಿ ಅವರನ್ನು ಕಾನೂನು ಕ್ರಮ ಜರುಗಿಸಿ ಗಡೀಪಾರು ಮಾಡಲಾಗುವುದು ಎಂದಿದ್ದಾರೆ.
ಯಾರಾದರೂ ಅನುಮಾನದ ಆಧಾರದ ಮೇಲೆ ಅಥವಾ ಯಾವುದೇ ಕಾರಣಕ್ಕಾಗಿ ಬಾಂಗ್ಲಾದೇಶಿ ಅಥವಾ ಇತ್ಯಾದಿ ಸಂದೇಶ ಹಂಚಿಕೊಂಡರೆ ಅಥವಾ ಜನರ ಮೇಲೆ ದಾಳಿ ಮಾಡುವ ರೀತಿಯಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹರಡಿದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಸಂದೇಶಗಳನ್ನು ಪೆÇೀಸ್ಟ್ ಮಾಡಿದ್ದಕ್ಕಾಗಿ ಈಗಾಗಲೇ ಇಬ್ಬರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದಿರುವ ಕಮಿಷನರ್ ರೆಡ್ಡಿ ಅಕ್ರಮವಾಗಿ ವಾಸಿಸುವ ಯಾರೇ ಇದ್ದರೂ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಕಾರ್ಯವಿಧಾನ ಅನುಸರಿಸಿ ಅವರನ್ನು ಯಾವುದೇ ವಿನಾಯಿತಿ ಇಲ್ಲದೆ ಕಾನೂನು ಪ್ರಕಾರ ಗಡೀಪಾರು ಮಾಡಲಾಗುವುದು. ಯಾರ ಮೇಲಾದರೂ (ಅಕ್ರಮವಾಗಿ ವಾಸಿಸುವವರು ಸೇರಿದಂತೆ) ದಾಳಿ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಅಂತಹವರ ವಿರುದ್ದವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಕಾನೂನು ಪಾಲಿಸದ ಕಾನೂನಿಗೆ ಗೌರವ ನೀಡದ ಯಾರೇ ಇದ್ದರೂ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.















0 comments:
Post a Comment