ಪೊಲೀಸರು ಮಕ್ಕಳಲ್ಲಿನ ಭಯ ಹೋಗಲಾಡಿಸಿ ಅವರ ರಕ್ಷಣೆಗೆ ಒತ್ತು ನೀಡಬೇಕು : ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ ಅಕ್ಷತಾ ಆದರ್ಶ್ - Karavali Times ಪೊಲೀಸರು ಮಕ್ಕಳಲ್ಲಿನ ಭಯ ಹೋಗಲಾಡಿಸಿ ಅವರ ರಕ್ಷಣೆಗೆ ಒತ್ತು ನೀಡಬೇಕು : ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ ಅಕ್ಷತಾ ಆದರ್ಶ್ - Karavali Times

728x90

30 January 2026

ಪೊಲೀಸರು ಮಕ್ಕಳಲ್ಲಿನ ಭಯ ಹೋಗಲಾಡಿಸಿ ಅವರ ರಕ್ಷಣೆಗೆ ಒತ್ತು ನೀಡಬೇಕು : ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ ಅಕ್ಷತಾ ಆದರ್ಶ್

ಮಂಗಳೂರು, ಜನವರಿ 30, 2026 (ಕರಾವಳಿ ಟೈಮ್ಸ್) : ಮಕ್ಕಳ ರಕ್ಷಣೆಗೆ ಅನೇಕ ಕಾಯ್ದೆಗಳನ್ನು ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಲ್ಲಿ ಪೊಲೀಸರ ಮೇಲಿರುವ  ಭಯವನ್ನು ಹೋಗಲಾಡಿಸಿ, ರಕ್ಷಣೆಯ ಅಗತ್ಯವಿದ್ದರೆ ಅವರಿಗೆ  ಸಹಕರಿಸಬೇಕು ಎಂದು  ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ. ಅಕ್ಷತಾ ಆದರ್ಶ್ ಹೇಳಿದರು.

ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜನವರಿ 29 ರಂದು ನಡೆದ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ. ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ಇಲಾಖೆಯ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ಪ್ರಕರಣಗಳ ನಿರ್ವಹಣೆ ಹಾಗೂ ಮಕ್ಕಳ ವಿವಿಧ ಕಾನೂನುಗಳ ಅನುಷ್ಠಾನದಲ್ಲಿ ಪೊಲೀಸ್ ಪಾತ್ರದ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರು ನೊಂದ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕು. ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚಿನ  ಒತ್ತು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಮಕ್ಕಳ ಕಾಯ್ದೆಗಳ ಕುರಿತು ಸಾರ್ವಜನಿಕರಿಗೆ ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಬಹುದು ಎಂದರು. 

ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಪೊಲಿಸ್ ಇಲಾಖೆ ನಿರಂತರವಾಗಿ ಶ್ರಮಿಸಬೇಕು. ಮಕ್ಕಳ ಜೊತೆ ಸಂಪರ್ಕ ಸಾಧಿಸಿ ಸಹಾಯವಾಣಿಯ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳಲ್ಲಿ ಪೊಲಿಸರ ಮೇಲಿರುವ ಭಯದ ವಾತಾವರಣವನ್ನು ದೂರ ಮಾಡಿ ನೊಂದ ಮಕ್ಕಳಿಗೆ ಭರವಸೆ ಮತ್ತು ಆತ್ಮ ವಿಶ್ವಾಸವನ್ನು ಮೂಡಿಸಬೇಕು ಎಂದು ಡಾ. ಅಕ್ಷತಾ ಆದರ್ಶ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಡಿಶನಲ್ ಎಸ್ಪಿ ಅನಿಲ್ ಕುಮಾರ್ ಭೂಮ ರೆಡ್ಡಿ ಮಾತನಾಡಿ, ಠಾಣಾ ಮಟ್ಟದಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಪ್ರಕರಣಗಳು ಬಂದಲ್ಲಿ ಸೂಕ್ತ ರಕ್ಷಣೆ ಒದಗಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಸಂತ್ರಸ್ತ ಮಕ್ಕಳಿಗೆ ಕಾನೂನು ನೆರವನ್ನು ಒದಗಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು, ನಾಪತ್ತೆ ಪ್ರಕರಣಗಳು  ಹೆಚ್ಚುತ್ತಿದ್ದು ಅವರಿಗೆ  ಅನಿವಾರ್ಯ ಸಂದರ್ಭದಲ್ಲಿ ಅಗತ್ಯ ನೆರವು ಕಲ್ಪಿಸಿಕೊಡಬೇಕು. ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆಯ ಕಾಯ್ದೆಗಳ ಬಗ್ಗೆ  ಅರಿವು ಮೂಡಿಸಲು ಪೊಲೀಸ್ ಇಲಾಖೆ ಮಹತ್ವದ ಪಾತ್ರ ವಹಿಸಬೇಕು. ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಗಳನ್ನು ಮಾಡಬೇಕು ಎಂದರು. 

ಎಸ್ ಜೆ ಪಿ ಯು ಸಿಐಡಿ ಪೊಲೀಸ್ ತರಬೇತುದಾರ ರೋಹಿತ್ ಸಿ ಜಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ಉಪ ಪೊಲೀಸ್ ಆಯುಕ್ತ ರವಿಶಂಕರ್, ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸರು ಮಕ್ಕಳಲ್ಲಿನ ಭಯ ಹೋಗಲಾಡಿಸಿ ಅವರ ರಕ್ಷಣೆಗೆ ಒತ್ತು ನೀಡಬೇಕು : ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ ಅಕ್ಷತಾ ಆದರ್ಶ್ Rating: 5 Reviewed By: karavali Times
Scroll to Top