ಬೆಂಗಳೂರು, ಜೂನ್ 19, 2026 (ಕರಾವಳಿ ಟೈಮ್ಸ್) : ಭಾರಿ ಕುತೂಹಲ ಮೂಡಿಸಿದ್ದ ರಾಜ್ಯದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷ ತನ್ನ ಸಂಖ್ಯಾಬಲವನ್ನೂ ಮೀರಿ ಒಂದು ಹೆಚ್ಚುವರಿ ಸ್ಥಾನದಲ್ಲಿ ಗೆಲುವು ಪಡೆಯುವ ಮೂಲಕ ಕಣದಲ್ಲಿದ್ದ ಐದೂ ಮಂದಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ವಿರೋಧ ಪಕ್ಷದ ಮೈತ್ರಿಕೂಟದ ಶಾಸಕರ ವಿರುದ್ದ ಇದೀಗ ಅಡ್ಡ ಮತದಾನದ ಆರೋಪಗಳು ಕೇಳಿ ಬರುತ್ತಿದೆ.
ಕಾಂಗ್ರೆಸ್ಸಿನ 5 ಮಂದಿ ಮೇಲ್ಮನೆ ಪ್ರವೇಶೀಸಿದರೆ, ಬಿಜೆಪಿಯ ಇಬ್ಬರು ಆಯ್ಕೆಯಾಗಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ಪಕ್ಷದ ಏಕೈಕ ಅಭ್ಯರ್ಥಿ ಗೋವಿಂದ ರಾಜು ಕಾಂಗ್ರೆಸ್ ಪಕ್ಷದ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ವಿರುದ್ದ ವಿರೋಚಿತ ಸೋಲನುಭವಿಸುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ.
ಅಧಿಕೃತ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‍ಗೆ 135 ಶಾಸಕರ ಬಲವಿದ್ದರೂ, ಪಕ್ಷವು ಒಟ್ಟು 151 ಮತಗಳನ್ನು ಪಡೆದು ತನ್ನ ಸಂಖ್ಯಾಬಲಕ್ಕಿಂತ 16 ಮತಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಐವರು ಅಭ್ಯರ್ಥಿಗಳು ಕೂಡಾ ಮೊದಲ ಸುತ್ತಿನಲ್ಲೇ ಆಯ್ಕೆಯಾಗಿದ್ದಾರೆ. ಬಿಜೆಪಿಗೆ 64 ಶಾಸಕರ ಬಲವಿದ್ದರೂ, ಅದರ ಇಬ್ಬರು ಅಭ್ಯರ್ಥಿಗಳು ಒಟ್ಟಾರೆ 56 ಮತಗಳನ್ನು ಮಾತ್ರ ಪಡೆದಿದ್ದು, ಪಕ್ಷಕ್ಕೆ ಎಂಟು ಮತಗಳ ಕೊರತೆ ಉಂಟಾಗಿದೆ. ಬಿಜೆಪಿ ಅಭ್ಯರ್ಥಿ ಲಿಂಗರಾಜ ಪಾಟೀಲ್ ಅವರಿಗೆ ನಿಗದಿಪಡಿಸಿದ್ದ 30 ಮತಗಳ ಬದಲಿಗೆ 27 ಮತಗಳು ಲಭಿಸಿದ್ದರೆ, ರಘು ಕೆ. ಅವರಿಗೆ ಅಗತ್ಯ ಕೋಟಾದಿಂದ ಒಂದು ಮತ ಕಡಿಮೆಯಾಗಿ 29 ಮತಗಳು ಬಂದಿವೆ.
ಜೆಡಿಎಸ್‍ಗೆ 18 ಶಾಸಕರಿದ್ದರೂ, ಅದರ ಅಭ್ಯರ್ಥಿಗೆ ಕೇವಲ 14 ಮತಗಳು ಮಾತ್ರ ದೊರೆತಿವೆ. ಎನ್‍ಡಿಎ ಮೈತ್ರಿ ಒಪ್ಪಂದದ ಭಾಗವಾಗಿ ಬಿಜೆಪಿ ತನ್ನ ಮೂವರು ಶಾಸಕರ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲು ನಿರ್ಧರಿಸಿತ್ತು. ಹೀಗಾಗಿ ಜೆಡಿಎಸ್ ಅಭ್ಯರ್ಥಿಗೆ ಒಟ್ಟು 21 ಮತಗಳು ಸಿಗಬೇಕಾಗಿತ್ತು. ಆದರೆ ಅಂತಿಮವಾಗಿ ಅವರಿಗೆ ಕೇವಲ 14 ಮತಗಳು ಮಾತ್ರ ಲಭಿಸಿದ್ದು, ಏಳು ಮತಗಳ ಕೊರತೆ ಕಂಡುಬಂದಿದೆ.
ಕಾಂಗ್ರೆಸ್ ಪಕ್ಷದಿಂದ ಬಿ.ಕೆ. ಹರಿಪ್ರಸಾದ್ ಅವರಿಗೆ 30 ಮತಗಳು, ತಿಪ್ಪಣ್ಣಪ್ಪ ಕಮಕನೂರು ಅವರಿಗೆ 30 ಮತಗಳು, ಪಿ.ವಿ. ಮೋಹನ್ ಅವರಿಗೆ 29 ಮತಗಳು, ಬಿ.ಎಸ್. ಶಿವಣ್ಣ ಅವರಿಗೆ 30 ಮತಗಳು ಮತ್ತು 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರಿಗೆ 32 ಮತಗಳು ಲಭಿಸಿವೆ.
ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಆರ್. ರಘು ಅವರಿಗೆ 29 ಮತಗಳು ಮತ್ತು ಲಿಂಗರಾಜು ಪಾಟೀಲ್ ಅವರಿಗೆ 27 ಮತಗಳು ಲಭಿಸಿವೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಗೋವಿಂದರಾಜುಗೆ 14 ಮತಗಳು ಮಾತ್ರ ಬಂದಿದೆ.
ಮತ ಎಣಿಕೆ ಬಳಿಕ ಎನ್‍ಡಿಎ ಕೂಟದ 12 ಮತಗಳು ಏನಾದವು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಅಡ್ಡ ಮತದಾನ ಮಾಡಿದವರು ಯಾರೆಂಬುದು ಶೀಘ್ರದಲ್ಲೇ ತಿಳಿಯಲಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಎಚ್ಚರಿಸಿದೆ.
ಎನ್‍ಡಿಎ ಮೈತ್ರಿಕೂಟದ ಒಟ್ಟು ಕೊರತೆ 12 ಮತಗಳಾಗಿದ್ದು, ಅದರಲ್ಲಿ ಬಿಜೆಪಿಯಿಂದ ಎಂಟು ಮತ್ತು ಜೆಡಿಎಸ್‍ನಿಂದ ನಾಲ್ಕು ಮತಗಳು ಕಡಿಮೆಯಾಗಿವೆ. ಈ ಮತಗಳಲ್ಲಿ ಎಷ್ಟು ಕಾಂಗ್ರೆಸ್ ಪರ ಅಡ್ಡ ಮತದಾನವಾಗಿವೆ ಮತ್ತು ಎಷ್ಟು ಮತಗಳು ಅಮಾನ್ಯಗೊಂಡಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚುನಾವಣಾಧಿಕಾರಿಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆಯಷ್ಟೆ.
ಫಲಿತಾಂಶದ ಬಗ್ಗೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಡ್ಡ ಮತದಾನದ ಕುರಿತು ಯಾವುದೇ ಮಾಹಿತಿ ಇಲ್ಲ. ಕೆಲವರು ತಮ್ಮ ಆತ್ಮಸಾಕ್ಷಿಯ ಮತ ಚಲಾಯಿಸಿರಬಹುದು. ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ಆರೋಪಗಳು ಅವರ ನಿರಾಶೆಯನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದ್ದು, ಅವರು ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಿರಬಹುದು ಎಂದು ಸಿಎಂ ತಿಳಿಸಿದ್ದಾರೆ.














0 comments:
Post a Comment