ಬಂಟ್ವಾಳ, ಜುಲೈ 29 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾಗಿರುವ ಬಿ ಎಂ ಅಬ್ಬಾಸ್ ಅಲಿ ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಆಗಮಿಸಿದ ಎಐಸಿಸಿ ವೀಕ್ಷಕರೂ, ಕ್ಯಾಲಿಕಟ್ ಶಾಸಕರೂ ಆಗಿರುವ ಜಯಂತ್ ಅವರಿಗೆ ತಮ್ಮ ಉಮೇದುವಾರಿಕೆಯ ಬಗ್ಗೆ ಜುಲೈ 28 ರಂದು ಅರ್ಜಿ ಸಲ್ಲಿಸಿದ್ದಾರೆ. ಈ ಸಂಧರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಜೊತೆಗಿದ್ದರು.
ಅಲ್ಪಸಂಖ್ಯಾತ ಮುಸ್ಲಿಂ ಕೋಟಾದಲ್ಲಿ ಅಬ್ಬಾಸ್ ಅಲಿ ಅವರು ತಮಗೆ ಪ್ರಾಮುಖ್ಯತೆ ಕೋರಿದ್ದು, ಇವರು ವಿದ್ಯಾರ್ಥಿ ದಿಸೆಯಲ್ಲಿ ಎನ್ ಎಸ್ ಯು ಐ ಹಾಗೂ ಯುವ ಕಾಂಗ್ರೆಸ್ ಘಟಕದಲ್ಲಿ ಕೆಲಸ ಮಾಡಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ್ದಾರೆ. ಬಳಿಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಕಾಂಗ್ರೆಸ್ ಅಸಂಘಟಿತ ಪದಾಧಿಕಾರಿಯಾಗಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿರುವ ಇವರು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸತತ 9 ವರ್ಷ ಸೇವೆ ಸಲಿಸಿದ್ದು, ಆ ಸಂದರ್ಭ ಬಂಟ್ವಾಳ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಬಂಟ್ವಾಳದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರು ಶಾಸಕರಾಗಿ ಅಲ್ಲದೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಇದ್ದರು ಎಂಬುದು ಗಮನಾರ್ಹ ಅಂಶ.
ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ಇವರು ವಿದ್ಯಾವಂತ ಉಮೇದುವಾರರಾಗಿದ್ದು, ಈ ಹಿಂದೆ ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಸಮಾಜದ ಎಲ್ಲ ವರ್ಗದ ಜನರೊಂದಿಗೆ, ಅದರಲ್ಲೂ ಪ್ರಮುಖವಾಗಿ ಯುವ ಸಮೂಹದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು, ವಿವಿಧ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕøತಿಕ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ತಳಮಟ್ಟದಲ್ಲಿ ಜನರ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಈ ಎಲ್ಲ ವೈಯುಕ್ತಿಕ ಹಾಗೂ ಸಾಮಾಜಿಕ, ರಾಜಕೀಯ ಹಿನ್ನಲೆಯನ್ನು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿರುವ ಇವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕವನ್ನು ಮುನ್ನಡೆಸಲು ಅವಕಾಶ ಮಾಡಿಕೊಡುವಂತೆ ಇದೀಗ ವೀಕ್ಷಕರಿಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ.











0 comments:
Post a Comment