ಬಂಟ್ವಾಳ, ಜುಲೈ 29 2026 (ಕರಾವಳಿ ಟೈಮ್ಸ್) : ರಾಜ್ಯ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಜುಲೈ 28 ರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಮಿಸಿರುವ ಎಐಸಿಸಿ ವೀಕ್ಷಕರೂ, ಕ್ಯಾಲಿಕಟ್ ಶಾಸಕರೂ ಆಗಿರುವ ಜಯಂತ್ ಅವರನ್ನು ಭೇಟಿಯಾದ ಕೆಪಿಸಿಸಿ ಸದಸ್ಯರಾಗಿರುವ ಪಿಯೂಸ್ ರೋಡ್ರಿಗಸ್ ಅವರು ಈ ಬಾರಿ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆ ನಿರ್ವಹಿಸಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಅಲ್ಪಸಂಖ್ಯಾತ ಕ್ರಿಶ್ಚಿಯನ್ ಕೋಟಾದಲ್ಲಿ ಪಿಯೂಸ್ ಎಲ್ ರೋಡ್ರಿಗಸ್ ಅವರು ತಮಗೆ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆ ನಿಭಾಯಿಸಲು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ತಳಮಟ್ಟದಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಪಿಯೂಸ್ ಅವರು ಪಕ್ಷದ ಪರ ಕಾರ್ಯಚಟುವಟಿಕೆಗಳಿಂದಾಗಿ ಪಕ್ಷದ ನಾಯಕರುಗಳ ವಿಶ್ವಾಸ ಗಿಟ್ಟಿಸುವಲ್ಲಿಯೂ ಸಫಲರಾಗಿದ್ದಾರೆ. ಅಲ್ಲದೆ ಪಕ್ಷದ ನಾಯಕರು ನೀಡಿರುವ ಎಲ್ಲ ಹುದ್ದೆಗಳನ್ನು ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯುತವಾಗಿ ನಿಭಾಯಿಸಿ ಯಶಸ್ವಿಯೂ ಆಗಿದ್ದಾರೆ.
ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಸದಸ್ಯರಾಗಿ ರಾಜ್ಯಮಟ್ಟದಲ್ಲಿ ಸೇವೆ ಸಲ್ಲಿರುವ ಇವರು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ರೈಸ್ತ ಸಮುದಾಯದ ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಇವರು ಸಮಾಜದ ಎಲ್ಲ ವರ್ಗದ ಜನರೊಂದಿಗೆ, ಯುವಕ ಸಮುದಾಯದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು, ವಿವಿಧ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕøತಿಕ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಹಿನ್ನಲೆಯನ್ನು ಮುಂದಿಟ್ಟು ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಚುಕ್ಕಾಣಿ ಹಿಡಿದು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಅವಕಾಶ ನೀಡುವಂತೆ ಅವರು ಪಕ್ಷದ ವೀಕ್ಷಕರಿಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ.















0 comments:
Post a Comment