ಪಂಜಾಬ್‍ಗೆ ಸೋಲುಣಿಸುವ ಮೂಲಕ ತನ್ನ ಜೊತೆ ಪಂಜಾಬ್ ತಂಡವನ್ನೂ ಟೂರ್ನಿಯಿಂದ ಹೊರಗಟ್ಟಿದ ಚೆನ್ನೈ - Karavali Times ಪಂಜಾಬ್‍ಗೆ ಸೋಲುಣಿಸುವ ಮೂಲಕ ತನ್ನ ಜೊತೆ ಪಂಜಾಬ್ ತಂಡವನ್ನೂ ಟೂರ್ನಿಯಿಂದ ಹೊರಗಟ್ಟಿದ ಚೆನ್ನೈ - Karavali Times

728x90

1 November 2020

ಪಂಜಾಬ್‍ಗೆ ಸೋಲುಣಿಸುವ ಮೂಲಕ ತನ್ನ ಜೊತೆ ಪಂಜಾಬ್ ತಂಡವನ್ನೂ ಟೂರ್ನಿಯಿಂದ ಹೊರಗಟ್ಟಿದ ಚೆನ್ನೈ



ಅಬುಧಾಬಿ, ನ. 02, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಐಪಿಎಲ್ ಕೂಟದ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ತಂಡದ ವಿರುದ್ದ 9 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ತಾನು ಟೂರ್ನಿಯಿಂದ ಔಟ್ ಆಗುವುದರ ಜೊತೆಗೆ ಪಂಜಾಬ್ ತಂಡವನ್ನು ಕೂಡಾ ಟೂರ್ನಿಯಿಂದ ಹೊರ ನಡೆಯುವಂತೆ ಮಾಡಿದೆ. 

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆದರೂ ಬಳಿಕ  ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿತು. ದೀಪಕ್ ಹೂಡಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಅಂತಿಮವಾಗಿ ನಿಗದಿತ 20 ಓವರ್‍ಗಳಲ್ಲಿ 153 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಫಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಡ್ ಅವರ ಉತ್ತಮ ಜೊತೆಯಾಟದಿಂದ ಇನ್ನೂ 7 ಎಸೆತಗಳು ಬಾಕಿ ಉಳಿದಿರುವಂತೆ ಪಂದ್ಯವನ್ನು ಗೆದ್ದುಕೊಂಡಿತು.

53 ಪಂದ್ಯಗಳು ಕಳೆದರು ಈ ಬಾರಿಯ ಐಪಿಎಲ್‍ನಲ್ಲಿ ಪ್ಲೇ ಆಫ್ ತಲುಪುವ ನಾಲ್ಕು ತಂಡಗಳು ಇನ್ನೂ ಅಂತಿಮವಾಗಿಲ್ಲ. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಗೆದ್ದ ಚೆನ್ನೈ ಮತ್ತು ಸೋತ ಪಂಜಾಬ್ ತಂಡಗಳೆರಡು ಟೂರ್ನಿಯಿಂದ ಹೊರ ನಡೆದಿವೆ. ಮುಂಬೈ ಇಂಡಿಯನ್ಸ್ ತಂಡ ಮಾತ್ರ ಈಗಾಗಲೇ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಪಡೆದಿದೆ. ಈ ಪಂದ್ಯದಲ್ಲಿ ಪಂಜಾಬ್ ತಂಡ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೆ ರನ್‍ರೇಟ್ ಆಧಾರದ ಮೇಲೆ ಪ್ಲೇ ಆಫ್ ತಲುಪುವ ಅವಕಾಶವಿತ್ತು. ಆದರೆ ಸೋಲುವ ಮೂಲಕ ಅಭಿಯಾನ ಅಂತ್ಯಗೊಳಿಸಿಕೊಂಡಿದೆ. 

154 ರನ್‍ಗಳ ಗುರಿ ಬೆನ್ನಟ್ಟಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಫಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಡ್ ಮೊದಲ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ತಂಡ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿ ವಿಜಯದತ್ತ ಮುನ್ನುಗ್ಗಿತು. ಈ ಜೋಡಿ 59 ಎಸೆತಗಳಲ್ಲಿ 82 ರನ್‍ಗಳ ಜೊತೆಯಾಟವಾಡಿತು. 34 ಎಸೆತಗಳಲ್ಲಿ 48 ರನ್ ಗಳಿಸಿದ್ದ ಫಫ್ ಡು ಪ್ಲೆಸಿಸ್ ಅವರು ಕ್ರಿಸ್ ಜೋರ್ಡಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ರುತುರಾಜ್ ಗಾಯಕ್ವಡ್ ಹಾಗೂ ಅಂಬಾಟಿ ರಾಯುಡು ಚೆನ್ನೈ ತಂಡವನ್ನು 100ರ ಗಡಿ ದಾಟಿಸಿದರು. 

ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ ರುತುರಾಜ್ ಗಾಯಕ್ವಡ್ 38 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದರು. ನಂತರ 54 ಎಸೆತಗಳಲ್ಲಿ 72 ರನ್‍ಗಳ ಅಜೇಯ ಜೊತೆಯಾಟವಾಡಿದ ರುತುರಾಜ್ ಗಾಯಕ್ವಡ್ ಹಾಗೂ ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂಬಾಟಿ ರಾಯುಡು ಅಜೇಯ 30 ಹಾಗೂ ಗಾಯಕ್ವಡ್ ಅಜೇಯ 62 ರನ್ ಭಾರಿಸಿ ಗೆಲುವಿನಲ್ಲಿ ಅಮೂಲ್ಯ ಕೊಡುಗೆ ನೀಡಿದರು. 

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ತಂಡ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದ ಯಾವುದೇ ಬ್ಯಾಟ್ಸ್‍ಮನ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಆದರೆ ಕೊನೆಯಲ್ಲಿ ಉತ್ತಮವಾಗಿ ಆಡಿದ ದೀಪಕ್ ಹೂಡಾ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳ ಸಹಿತ 61 ರನ್ ಸಿಡಿಸಿದರು. ಅಂತಿಮವಾಗಿ ಪಂಜಾಬ್ ತಂಡ ಚೆನ್ನೈಗೆ 154 ರನ್‍ಗಳ ಟಾರ್ಗೆಟ್ ನಿಗದಿಪಡಿಸಿತ್ತು. 








  • Blogger Comments
  • Facebook Comments

0 comments:

Post a Comment

Item Reviewed: ಪಂಜಾಬ್‍ಗೆ ಸೋಲುಣಿಸುವ ಮೂಲಕ ತನ್ನ ಜೊತೆ ಪಂಜಾಬ್ ತಂಡವನ್ನೂ ಟೂರ್ನಿಯಿಂದ ಹೊರಗಟ್ಟಿದ ಚೆನ್ನೈ Rating: 5 Reviewed By: karavali Times
Scroll to Top