ಮೈಸೂರು (ಕರಾವಳಿ ಟೈಮ್ಸ್) : ದೇಶಾದ್ಯಂತ ಈಗಾಗಲೇ 21 ದಿನಗಳ ಕಾಲ ವಿಧಿಸಲಾಗಿರುವ ಲಾಕ್‍ಡೌನ್ ಅವಧಿ ಎಪ್ರಿಲ್ 14ಕ್ಕೆ ಕೊನೆಗೊಳ್ಳುತ್ತಿದ್ದು, ಒಂದು ವೇಳೆ ಕೇಂದ್ರ ಸರಕಾರ ವೈರಸ್ ನಿಗ್ರಹದ ದೃಷ್ಟಿಯಿಂದ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸುವುದಾದರೆ ಸ್ವಾಗತಾರ್ಹ ಕ್ರಮ. ಆದರೆ ಈ ಸಂದರ್ಭ ಈಗಾಗಲೇ ರಾಜ್ಯದ ವಿವಿಧೆಡೆ ವಿವಿಧ ಕೆಲಸ-ಕಾರ್ಯಗಳಲ್ಲಿ ನಿರತರಾಗಿದ್ದು, ಊರಿಗೆ ಮರಳಲಾಗದೆ ಅಲ್ಲಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ಹಾಗೂ ಇತರ ಮಂದಿಗಳು ತಮ್ಮ ಸ್ವಂತ ಊರುಗಳಿಗೆ ಪ್ರಯಾಣಿಸಲು ಕನಿಷ್ಠ ಒಂದು ದಿನದ ಅವಕಾಶ ಕಲ್ಪಿಸಿಕೊಡುವಂತೆ ಮೈಸೂರಿನ ಅತಾಯೇ-ರಸೂಲ್ ಮೂವ್‍ಮೆಂಟ್ ಇದರ ರಾಜ್ಯಾಧ್ಯಕ್ಷ ಹಝ್ರತ್ ಸೂಫಿ ಖ್ವಾಜಾ ಅಝೀಮ್ ಅಲಿ ಶಾ ಚಿಶ್ತಿ ಮೈಸೂರಿ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಸರಕಾರ ಹಠಾತ್ ಆಗಿ ವಿಧಿಸಿರುವ ಲಾಕ್‍ಡೌನ್‍ನಿಂದಾಗಿ ಈಗಾಗಲೇ ವಲಸಿಗರಾಗಿ ಬಂದು ರಾಜ್ಯದ ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರು ಹಾಗೂ ವಿವಿಧ ಸ್ಥರದ ಜನಗಳು ತಮ್ಮ ತಮ್ಮ ಊರಿಗೆ ಮರಳಲು ಸಾಧ್ಯವಾಗದೆ ತಾವು ಇದ್ದಲ್ಲೇ ಬಾಕಿಯಾಗಿದ್ದಾರೆ. ಇಂತಹ ಕೆಲವರ ಹೆತ್ತವರು, ಹೆಂಡತಿ-ಮಕ್ಕಳು ಊರಿನಲ್ಲಿದ್ದು, ಕಾರ್ಮಿಕರು ಪರವೂರಿನಲ್ಲಿರುವಂತಾಗಿದೆ. ಕುಟುಂಬಗಳು ಪರಸ್ಪರ ವಿಭಜಿಸಿ ಹೋಗಿರುವುದರಿಂದ ಸಹಜವಾಗಿಯೇ ಸಮಸ್ಯೆ ಎದುರಿಸುವಂತಾಗಿದೆ.
ಇಂತಹ ವಲಸಿಗರ ಸಮಸ್ಯೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಸೂಕ್ತ ನಿರ್ಬಂಧಗಳೊಂದಿಗೆ ಕನಿಷ್ಠ ಖಾಸಗಿ ವಾಹನಗಳಲ್ಲಾದರೂ ತಮ್ಮ ಊರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟು ಪರಿಹಾರ ಕಲ್ಪಿಸಿಕೊಡಬೇಕು ಎಂದವರು ಸಿಎಂ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.
0 comments:
Post a Comment