ಬಂಟ್ವಾಳ (ಕರಾವಳಿ ಟೈಮ್ಸ್) : ನರಿಕೊಂಬು, ಬಾಳ್ತಿಲ ಹಾಗೂ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್-19 ತಡೆಗಾಗಿ ರಚನೆಗೊಂಡ ಟಾಸ್ಕ್ ಫೆÇೀರ್ಸ್ ಸದಸ್ಯರ ವಿಶೇಷ ಸಭೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಗುರುವಾರ ನಡೆಯಿತು.
ಸಂಕಷ್ಟದಲ್ಲಿರುವ ಜನತೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ ಎಂದು ಶಾಸಕರು ಈ ಸಂದರ್ಭ ಸೂಚಿಸಿದರು. ಸಾರ್ವಜನಿಕರಿಗೆ ಹೋಂ ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ಸಮಿತಿ ಅಧಿಕಾರಿಗಳು ನೀಡಬೇಕು. ಕೋವಿಡ್ ಲಾಕ್‍ಡೌನ್ ಅವಧಿಯಲ್ಲಿ ಸಾರ್ವಜನಿಕರು ದಿನಬಳಕೆಯ ವಸ್ತುಗಳಿಗಾಗಿ ಪ್ರತಿದಿನ ಮನೆಯಿಂದ ಹೊರಗೆ ಬರುವಂತಹ ಪರಿಪಾಠ ಬೆಳೆಸಿಕೊಳ್ಳುವುದು ಸಮಂಜಸವಲ್ಲ, ವಾರಕ್ಕೆ ಬೇಕಾಗುವಷ್ಟು ಸಾಮಾಗ್ರಿಗಳನ್ನು ದಾಸ್ತಾನು ಮಾಡುವಂತೆ ಶಾಸಕರು ಸಲಹೆ ನೀಡಿದರು.
ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುವ ಉದ್ದೇಶದಿಂದ ಸುತ್ತಾಡಿ ಬರುವುದು ಉತ್ತಮ ಬೆಳವಣಿಗೆಯಲ್ಲ.
ಲಾಕ್‍ಡೌನ್ ಅಥವಾ ಕೊರೊನಾ ವೈರಸ್ ಸಂಪೂರ್ಣವಾಗಿ ತಡೆಗಟ್ಟಲು ಎಷ್ಟು ಅವಧಿ ಬೇಕು ಎಂಬ ಸ್ಪಷ್ಟವಾದ ಕಲ್ಪನೆ ಯಾರಿಗೂ ಇಲ್ಲ. ಹಾಗಾಗಿ ಪ್ರಸ್ತುತ ನಾವು ಅತ್ಯಂತ ಜಾಗರೂಕತೆಯಿಂದ ಅಗತ್ಯ ವಸ್ತುಗಳನ್ನು ಸಂದರ್ಭೋಚಿತವಾಗಿ ಬಳಕೆ ಮಾಡಲು ಅಭ್ಯಾಸ ಮಾಡುವ ಅಗತ್ಯವಿದೆ, ಸರಕಾರ ಅಥವಾ ಸಂಘ-ಸಂಸ್ಥೆಗಳು ನೀಡುವ ದಿನಬಳಕೆಯ ವಸ್ತುಗಳ ಬಳಕೆಯಲ್ಲಿ ದುಂದುವೆಚ್ಚ ಬೇಡ ಎಂಬ ಕಿವಿಮಾತನ್ನು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ ಎಂದವರು ಹೇಳಿದರು.
ಕಾರಣಾಂತರಗಳಿಂದ ಗ್ರಾಮ ಮಟ್ಟದಲ್ಲಿ ಬಿ.ಪಿ.ಎಲ್. ವಂಚಿತ ಕುಟುಂಬಗಳಿದ್ದರೆ ಅಂತವರನ್ನು ಗುರುತಿಸಿ ಪಟ್ಟಿ ಕೊಡಿ ಅವರಿಗೆ ರೇಷನ್ ನೀಡುವ ಕೆಲಸ ಮಾಡುವ ಭರವಸೆ ನೀಡಿದರು. ಜೊತೆಗೆ ಅರ್ಹ ವ್ಯಕ್ತಿಗಳು ಸಾಮಾಜಿಕ ಪಿಂಚಣಿಯಿಂದ ವಂಚಿತರಾಗಿದ್ದರೆ ಅಂತವರನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸಿ ಅವರಿಗೂ ನೆರವು ನೀಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಕಲ್ಲಡ್ಕ ಕೆಲವು ದಿನಸಿ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ದರವನ್ನು ಸಾಮಾಗ್ರಿಗಳಿಗೆ ಬಳಕೆದಾರರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ದೂರನ್ನು ಗೋಳ್ತಮಜಲು ಗ್ರಾ.ಪಂ.ನಲ್ಲಿ ನಡೆದ ಸಭೆಯಲ್ಲಿ ಟಾಸ್ಕ್‍ಪೆÇೀರ್ಸ್ ಸಮಿತಿ ಅಧಿಕಾರಿಗಳು ಶಾಸಕರಲ್ಲಿ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ದುಪ್ಪಟ್ಟು ದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡುತ್ತೇನೆ ಎಂದರು.
ಗ್ರಾ.ಪಂ. ಪಿ.ಡಿ.ಒ.ಗಳಿಗೆ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಅಧಿಕಾರವಿರುವುದರಿಂದ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಲ್ಲಿ ದರಪಟ್ಟಿ ನಮೂದಿಸಿ ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಇ.ಒ. ರಾಜಣ್ಣ, ಟಾಸ್ಕ್‍ಫೆÇೀರ್ಸ್ ಸಮಿತಿಯ ಅಧಿಕಾರಿಗಳು ಹಾಗೂ ಗ್ರಾ.ಪಂ. ಪಿ.ಡಿ.ಒ. ಗಳು, ಗ್ರಾಮಕರಣಿಕರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿರು ಉಪಸ್ಥಿತರಿದ್ದರು.
0 comments:
Post a Comment